Sunday, September 7, 2025

ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾಗೆ ಬಿಗ್‌ ಶಾಕ್‌: 2,500 ಪುಟಗಳ ಆರೋಪಪಟ್ಟಿ ಸಲ್ಲಿಸಿದ ಪೊಲೀಸರು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಹರಿಯಾಣದ ಹಿಸಾರ್‌ನಲ್ಲಿ ಬಂಧಿತರಾದ ಯೂಟ್ಯೂಬರ್ ಜ್ಯೋತಿ ಮಲ್ಹೋತ್ರಾ ವಿರುದ್ಧ ಮೂರು ತಿಂಗಳ ತನಿಖೆಯ ನಂತರ 2,500 ಪುಟಗಳ ಆರೋಪಪಟ್ಟಿಯನ್ನು ಹಿಸಾರ್ ಪೊಲೀಸರು ಸಲ್ಲಿಸಿದ್ದಾರೆ.

ಜ್ಯೋತಿ ಪಾಕಿಸ್ತಾನಕ್ಕೆ ಬೇಹುಗಾರಿಕೆ ನಡೆಸಿದ್ದಾಳೆ ಎಂಬುದಕ್ಕೆ ಸಾಕ್ಷ್ಯಗಳು ದೊರೆತಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜ್ಯೋತಿ ತನ್ನ ‘ಟ್ರಾವೆಲ್ ವಿಥ್ ಜೋ’ ಎಂಬ ಯೂಟ್ಯೂಬ್ ಚಾನೆಲ್ ಮೂಲಕ ಪ್ರವಾಸ ಸಂಬಂಧಿ ವಿಷಯಗಳನ್ನು ಹಂಚಿಕೊಳ್ಳುತ್ತಿದ್ದಳು. ಆದರೆ, ಆಕೆ ಪಾಕಿಸ್ತಾನದ ಭಾರತದಲ್ಲಿನ ರಾಯಭಾರ ಕಚೇರಿಯ ಎಹ್ಸಾನ್-ಉರ್-ರಹೀಮ್ ಉರ್ಫ್ ಡ್ಯಾನಿಶ್‌ನೊಂದಿಗೆ ಸಂಪರ್ಕದಲ್ಲಿದ್ದಳು ಮತ್ತು ಕನಿಷ್ಠ ಎರಡು ಬಾರಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಪಟ್ಟಿಯಲ್ಲಿ, ಜ್ಯೋತಿ ದೀರ್ಘಕಾಲದಿಂದ ಬೇಹುಗಾರಿಕೆಯಲ್ಲಿ ತೊಡಗಿದ್ದಾಳೆ ಎಂದು ತಿಳಿಸಲಾಗಿದೆ. ಆಕೆ ರಹೀಮ್ ಜೊತೆಗಿನ ಸಂಪರ್ಕದ ಜೊತೆಗೆ, ಪಾಕಿಸ್ತಾನದ ISI ಏಜೆಂಟ್‌ಗಳಾದ ಶಾಕಿರ್, ಹಸನ್ ಅಲಿ ಮತ್ತು ನಾಸಿರ್ ಧಿಲ್ಲನ್‌ನೊಂದಿಗೂ ಸಂಪರ್ಕದಲ್ಲಿದ್ದಳು ಎಂದು ಮೂಲಗಳು ತಿಳಿಸಿವೆ. ಜ್ಯೋತಿ ಕಳೆದ ವರ್ಷ ಏಪ್ರಿಲ್ 17ರಂದು ಪಾಕಿಸ್ತಾನಕ್ಕೆ ತೆರಳಿ ಮೇ 15ರಂದು ವಾಪಸ್ಸಾಗಿದ್ದಳು. 25 ದಿನಗಳ ನಂತರ ಜೂನ್ 10ರಂದು ಚೀನಾಕ್ಕೆ ತೆರಳಿ, ಜುಲೈವರೆಗೆ ಅಲ್ಲಿದ್ದು, ನಂತರ ನೇಪಾಳಕ್ಕೆ ತೆರಳಿದ್ದಳು.

ಕರ್ತಾರ್‌ಪುರ ಕಾರಿಡಾರ್ ಮೂಲಕ ಪಾಕಿಸ್ತಾನಕ್ಕೆ ತೆರಳಿದಾಗ ಆಕೆ ಪಾಕಿಸ್ತಾನದ ಪಂಜಾಬ್‌ನ ಮುಖ್ಯಮಂತ್ರಿ ಮತ್ತು ಮಾಜಿ ಪ್ರಧಾನಿ ನವಾಜ್ ಶರೀಫ್‌ರ ಪುತ್ರಿ ಮರಿಯಮ್ ನವಾಜ್ ಶರೀಫ್‌ರನ್ನು ಭೇಟಿಯಾಗಿ ಸಂದರ್ಶನ ನಡೆಸಿದ್ದಳು ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ