ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬಹುನಿರೀಕ್ಷಿತ ನಮ್ಮ ಮೆಟ್ರೋ ಹಂತ-3ರ ‘ಆರೆಂಜ್ ಲೈನ್’ ಕಾಮಗಾರಿಗೆ ಬಿಎಂಆರ್‌ಸಿಎಲ್ ಅಧಿಕೃತ ಚಾಲನೆ ನೀಡಿದೆ. ಜೆ.ಪಿ. ನಗರ 4ನೇ ಹಂತದಿಂದ ನಾಗರಭಾವಿವರೆಗಿನ ಮೆಟ್ರೋ ಹಳಿ ನಿರ್ಮಾಣಕ್ಕಾಗಿ ಬೃಹತ್ ಮೊತ್ತದ ಸಿವಿಲ್ ಟೆಂಡರ್‌ಗಳನ್ನು ಆಹ್ವಾನಿಸಲಾಗಿದ್ದು, ಫೆಬ್ರವರಿ 20ರಿಂದ 25ರೊಳಗೆ ಬಿಡ್ ಸಲ್ಲಿಸಲು ಗಡುವು ನೀಡಲಾಗಿದೆ.
BMRCL ಈ ಯೋಜನೆಯನ್ನು ಒಟ್ಟು ಮೂರು ಪ್ರಮುಖ ಪ್ಯಾಕೇಜ್‌ಗಳಾಗಿ ವಿಂಗಡಿಸಿದ್ದು, ಪ್ರತ್ಯೇಕ ಬಜೆಟ್ ಮೀಸಲಿಟ್ಟಿದೆ:
ಪ್ಯಾಕೇಜ್ 1 (1,375 ಕೋಟಿ): ಜೆ.ಪಿ. ನಗರ 4ನೇ ಹಂತದಿಂದ ಕಾಮಾಕ್ಯ ಜಂಕ್ಷನ್‌ವರೆಗೆ. ಇದರಲ್ಲಿ ಡಾಲರ್ಸ್ ಕಾಲೋನಿ ಫ್ಲೈಓವರ್ ತೆರವು ಹಾಗೂ ಡಬಲ್ ಡೆಕ್ಕರ್ (ರಸ್ತೆ ಮತ್ತು ಮೆಟ್ರೋ ಹಳಿ) ನಿರ್ಮಾಣ ಒಳಗೊಂಡಿದೆ. ಜೆ.ಪಿ. ನಗರ 5ನೇ ಹಂತ, ಕಾದಿರೇನಹಳ್ಳಿ ನಿಲ್ದಾಣಗಳು ಇಲ್ಲಿ ಬರಲಿವೆ.
ಪ್ಯಾಕೇಜ್ 2 (1,396 ಕೋಟಿ): ಹೊಸಕೆರೆಹಳ್ಳಿಯಿಂದ ನಾಗರಭಾವಿ ಸರ್ಕಲ್‌ವರೆಗೆ. ಈ ಮಾರ್ಗವು ದ್ವಾರಕಾನಗರ ಮತ್ತು ಮೈಸೂರು ರಸ್ತೆಯನ್ನು ಸಂಪರ್ಕಿಸಲಿದ್ದು, ಇಲ್ಲೂ ಕೂಡ ಡಬಲ್ ಡೆಕ್ಕರ್ ವ್ಯವಸ್ಥೆ ಇರಲಿದೆ.
ಪ್ಯಾಕೇಜ್ 3 (1,415 ಕೋಟಿ): ವಿನಾಯಕ ಲೇಔಟ್‌ನಿಂದ ನಾಗರಭಾವಿ ಬಿಡಿಎ ಕಾಂಪ್ಲೆಕ್ಸ್ ಹಾಗೂ ಸುಂಕದಕಟ್ಟೆ ಡಿಪೋ ಸಂಪರ್ಕ ಕಲ್ಪಿಸಲಿದೆ. ಇದರಲ್ಲಿ ಪಾಪಿರೆಡ್ಡಿಪಾಳ್ಯ ಸೇರಿದಂತೆ ಒಟ್ಟು 3 ನಿಲ್ದಾಣಗಳು ಇರಲಿವೆ.
2024ರ ಆಗಸ್ಟ್‌ನಲ್ಲಿ ಕೇಂದ್ರದ ಅನುಮೋದನೆ ದೊರೆತಿದ್ದರೂ, ಟೆಂಡರ್ ಪ್ರಕ್ರಿಯೆ ತಡವಾಗುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಆದರೆ ಈಗ ಬಿಎಂಆರ್‌ಸಿಎಲ್ ಈ ಮಹತ್ವದ ಹೆಜ್ಜೆ ಇಟ್ಟಿರುವುದು ಪಶ್ಚಿಮ ಮತ್ತು ದಕ್ಷಿಣ ಬೆಂಗಳೂರಿನ ಜನರಲ್ಲಿ ಸಂಭ್ರಮ ತಂದಿದೆ. ಮುಂದಿನ 3-4 ವರ್ಷಗಳಲ್ಲಿ ಈ ಮಾರ್ಗವು ಸಂಚಾರಕ್ಕೆ ಲಭ್ಯವಾಗುವ ನಿರೀಕ್ಷೆಯಿದೆ.


