ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಪಿಎಲ್ 19ನೇ ಆವೃತ್ತಿಯ ಆಟಗಾರರ ರೀಟೆನ್ಷನ್ ಅಧಿಕೃತ ಘೋಷಣೆಗೆ ಮುನ್ನವೇ ಫ್ರಾಂಚೈಸಿಗಳ ನಡುವೆ ನಡೆದ ಟ್ರೇಡ್ ಪ್ರಕ್ರಿಯೆ ಕ್ರಿಕೆಟ್ ಲೋಕದಲ್ಲಿ ಕುತೂಹಲ ಹೆಚ್ಚಿಸಿದೆ. ಹಲವು ಸ್ಟಾರ್ ಆಟಗಾರರು ತಂಡ ಬದಲಿಸಿಕೊಳ್ಳುತ್ತಿರುವ ನಡುವೆ, ಪ್ರಮುಖ ಬದಲಾವಣೆಗಳಲ್ಲಿ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್ ಅವರು ರಾಜಸ್ಥಾನ ರಾಯಲ್ಸ್ ತಂಡವನ್ನು ತೊರೆದು ಅಧಿಕೃತವಾಗಿ ಚೆನ್ನೈ ಸೂಪರ್ ಕಿಂಗ್ಸ್ ಜರ್ಸಿ ತೊಡಲು ಸಿದ್ಧರಾಗಿದ್ದಾರೆ.
ಸಿಎಸ್‌ಕೆ ಈ ಟ್ರೇಡ್ಗಾಗಿ 18 ಕೋಟಿ ರುಪಾಯಿ ಪಾವತಿಸಿದರೆ, ಪ್ರತಿಯಾಗಿ ರಾಜಸ್ಥಾನ ರಾಯಲ್ಸ್ ತಂಡವು ಚೆನ್ನೈನ ಆಲ್ರೌಂಡರ್ ರವೀಂದ್ರ ಜಡೇಜಾಗೆ 14 ಕೋಟಿ ಮತ್ತು ಸ್ಯಾಮ್ ಕರ್ರನ್‌ಗೆ 2.4 ಕೋಟಿ ರುಪಾಯಿ ನೀಡಿ ಅವರನ್ನು ಸೆಳೆದುಕೊಂಡಿದೆ.
ಐಪಿಎಲ್ ತನ್ನ ಅಧಿಕೃತ ಪ್ಲಾಟ್‌ಫಾರ್ಮ್‌ಗಳಲ್ಲಿ ಟ್ರೇಡ್ ಪಟ್ಟಿಯನ್ನು ಪ್ರಕಟಿಸಿದ್ದು, 10 ಪ್ರಮುಖ ಆಟಗಾರರ ಬದಲಾವಣೆಗಳು ಈ ಬಾರಿ ಗಮನ ಸೆಳೆದಿವೆ. ಜಡೇಜಾ ತಮ್ಮ ಐಪಿಎಲ್ ಪ್ರವಾಸ ಆರಂಭಿಸಿದ್ದ ರಾಜಸ್ಥಾನಕ್ಕೆ ಮರುಪ್ರವೇಶಿಸುತ್ತಿರುವುದು ವಿಶೇಷವಾಗಿದ್ದು, ಈ ಬದಲಾವಣೆ ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ಮುಂಬರುವ ಹಂಗಾಮಿಗಾಗಿ ನಡೆದ ಇತರ ಮಹತ್ವದ ಟ್ರೇಡ್ಗಳಲ್ಲಿ, ಅನುಭವಿ ವೇಗಿ ಮೊಹಮ್ಮದ್ ಶಮಿಯನ್ನು ಸನ್‌ರೈಸರ್ಸ್ ಹೈದರಾಬಾದ್ 10 ಕೋಟಿಗೆ ಲಖನೌ ಸೂಪರ್ ಜೈಂಟ್ಸ್‌ಗೆ ಮಾರಾಟ ಮಾಡಿದೆ. ಮಯಾಂಕ್ ಮಾರ್ಕಂಡೆ, ಅರ್ಜುನ್ ತೆಂಡುಲ್ಕರ್, ಶಾರ್ದೂಲ್ ಠಾಕೂರ್ ಮತ್ತು ಶೆರ್ಫನೆ ರುದರ್‌ಫೋರ್ಡ್ ಕೂಡ ಹೊಸ ತಂಡಗಳಿಗೆ ಸೇರಿಕೊಳ್ಳಲಿದ್ದಾರೆ.
ಅನಿರೀಕ್ಷಿತ ಬೆಳವಣಿಗೆಯೊಂದರಲ್ಲಿ ನಿತೀಶ್ ರಾಣಾ ಅವರನ್ನು ಕೆಕೆಆರ್ 4.2 ಕೋಟಿಗೆ ಡೆಲ್ಲಿ ಕ್ಯಾಪಿಟಲ್ಸ್‌ಗೆ ಬಿಡುವು ನೀಡಿದ್ದು, ಡೊನೊವನಾ ಫೆರೆರಾ 1 ಕೋಟಿಗೆ ರಾಜಸ್ಥಾನ ರಾಯಲ್ಸ್‌ಗೆ ಸೇರಿದ್ದಾರೆ. ಈ ಬದಲಾವಣೆಗಳು ಐಪಿಎಲ್ 2026ರ ಸ್ಪರ್ಧೆಯನ್ನು ಇನ್ನಷ್ಟು ರೋಚಕಗೊಳಿಸುವ ನಿರೀಕ್ಷೆ ವ್ಯಕ್ತವಾಗಿದೆ.

