ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರ ವಿಧಾನಸಭಾ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಸಿಗದ ಕಾರಣ ಅಸಮಾಧಾನಗೊಂಡಿದ್ದ ಮಾಜಿ ಕೇಂದ್ರ ಸಚಿವ ಅಶ್ವಿನಿ ಚೌಬೆ ಅವರ ಪುತ್ರ ಅರ್ಜಿತ್ ಶಾಶ್ವತ್ ಚೌಬೆ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಲು, ನಾಮಪತ್ರ ಸಲ್ಲಿಸಲು ತೆರಳಿ ವಾಪಸಾದ ಘಟನೆ ನಡೆದಿದೆ.
ಅರ್ಜಿ ಸಲ್ಲಿಸಲು ಜಿಲ್ಲಾಧಿಕಾರಿ ಕಚೇರಿಗೆ ಬಂದಿದ್ದ ಅರ್ಜಿತ್ ಚೌಬೆ ಅವರನ್ನು ಬೆಂಬಲಿಗರು ಹಾರ ಹಾಕಿ ಸ್ವಾಗತ ಮಾಡಿದ್ದರು. ಆದರೆ, ಫೋನ್ ಕರೆ ಬಂದ ತಕ್ಷಣ ಅವರು ಅಲ್ಲಿ ನಿಂತು ಮಾತನಾಡಿ, ಕೆಲವೇ ನಿಮಿಷಗಳಲ್ಲಿ ದಾಖಲೆಗಳನ್ನು ಸಲ್ಲಿಸದೇ ಹಿಂದಿರುಗಿದ್ದಾರೆ. ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅವರು, “ನನ್ನ ತಂದೆ ಅಶ್ವಿನಿ ಚೌಬೆ ಅವರು ಕರೆ ಮಾಡಿ ಸ್ಪಷ್ಟ ಸೂಚನೆ ನೀಡಿದರು. ನೀವು ಬಿಜೆಪಿ ಪಕ್ಷದಲ್ಲಿದ್ದೀರಿ ಮತ್ತು ಪಕ್ಷದಲ್ಲಿಯೇ ಮುಂದುವರಿಯಬೇಕು ಎಂದು ಹೇಳಿದರು ಎಂದು ತಿಳಿಸಿದರು.
ತಂದೆಯ ಮಾತುಗಳಿಗೆ ಗೌರವ ತೋರಿದ ಅರ್ಜಿತ್, ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ನಿರ್ಧಾರದಿಂದ ಹಿಂದೆ ಸರಿದರು. ತಮ್ಮ ನಿರ್ಧಾರದಿಂದ ಬಿಜೆಪಿಯ ಉನ್ನತ ನಾಯಕತ್ವದಿಂದ ಅವರು ನಿರಂತರ ಒತ್ತಡಕ್ಕೆ ಒಳಗಾಗಿದ್ದಾರು. ‘ನಾನು ನನ್ನ ತಂದೆ ಹಾಗೂ ಪಕ್ಷದ ವಿರುದ್ಧ ಹೋಗುವವನಲ್ಲ. ಬಿಜೆಪಿ ನನ್ನ ಕುಟುಂಬದಂತಿದೆ,’ ಎಂದು ಅವರು ಸ್ಪಷ್ಟಪಡಿಸಿದರು.

