February 25, 2026
Wednesday, February 25, 2026
spot_img

ರಸ್ತೆಯಲ್ಲೇ ಹೊತ್ತಿ ಉರಿದ ಬೈಕ್: ಸಮಯಪ್ರಜ್ಞೆಯಿಂದ ಬಚಾವಾದ ಯುವಕ, ಯುವತಿ!

ಹೊಸದಿಗಂತ ಮಳವಳ್ಳಿ:

ಚಲಿಸುತ್ತಿದ್ದ ಬೈಕ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಸವಾರರು ಪ್ರಾಣಾಪಾಯದಿಂದ ಪಾರಾದ ಘಟನೆ ಮಳವಳ್ಳಿ ಪಟ್ಟಣದ ತಾಲೂಕು ಕ್ರೀಡಾಂಗಣದ ಬಳಿ ಗುರುವಾರ ನಡೆದಿದೆ.

ತಾಲೂಕಿನ ಹಾಡ್ಲಿ ಸರ್ಕಲ್ ನಿವಾಸಿ ಸುದೀಪ್ ಅವರು ತಮ್ಮ ಪಲ್ಸರ್ ಬೈಕ್‌ನಲ್ಲಿ ಯುವತಿಯೊಂದಿಗೆ ಮಳವಳ್ಳಿ ಕಡೆಗೆ ಪ್ರಯಾಣಿಸುತ್ತಿದ್ದರು. ಡಾ. ಬಿ.ಆರ್. ಅಂಬೇಡ್ಕರ್ ಭವನ ಹಾಗೂ ಕ್ರೀಡಾಂಗಣದ ಸಮೀಪ ಬರುತ್ತಿದ್ದಂತೆ, ಬೈಕ್‌ನ ಇಂಜಿನ್‌ನಿಂದ ಏಕಾಏಕಿ ದಟ್ಟವಾದ ಹೊಗೆ ಹೊರಬರಲಾರಂಭಿಸಿದೆ.

ಹೊಗೆಯನ್ನು ಗಮನಿಸಿದ ಸುದೀಪ್ ತಕ್ಷಣ ಗಾಡಿಯನ್ನು ನಿಲ್ಲಿಸಿ, ಯುವತಿಯೊಂದಿಗೆ ಕೆಳಗಿಳಿದು ದೂರ ಓಡಿದ್ದಾರೆ. ಅವರು ಬೈಕ್‌ನಿಂದ ಇಳಿಯುತ್ತಿದ್ದಂತೆಯೇ ಇಡೀ ಬೈಕ್ ಬೆಂಕಿಯ ಉಂಡೆಯಾಗಿ ಮಾರ್ಪಟ್ಟಿದೆ. ಕಣ್ಣೆದುರೇ ಬೈಕ್ ಹೊತ್ತಿ ಉರಿಯುತ್ತಿದ್ದನ್ನು ಕಂಡು ಸಾರ್ವಜನಿಕರಲ್ಲಿ ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.

ಬೆಂಕಿ ವ್ಯಾಪಿಸುತ್ತಿದ್ದನ್ನು ಕಂಡ ಸ್ಥಳೀಯರು ಕೂಡಲೇ ಕಾರ್ಯಪ್ರವೃತ್ತರಾಗಿ ನೀರು ಹಾಕಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು. ಘಟನಾ ಸ್ಥಳಕ್ಕೆ ಮಳವಳ್ಳಿ ಪಟ್ಟಣದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಾರ್ಟ್ ಸರ್ಕ್ಯೂಟ್ ಅಥವಾ ಇಂಜಿನ್ ಓವರ್ ಹೀಟ್ ಬೆಂಕಿಗೆ ಕಾರಣವಾಗಿರಬಹುದು ಎಂದು ಅಂದಾಜಿಸಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !