Monday, December 22, 2025

ಗಾಜು ತುಂಬಿದ ಲಾರಿಗೆ ಬೈಕ್ ಡಿಕ್ಕಿ: ಇಬ್ಬರು ಬೈಕ್ ಸವಾರರಿಗೆ ಗಂಭೀರ ಗಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಯಚೂರು ಜಿಲ್ಲೆಯ ಸೀತಾನಗರ ಕ್ಯಾಂಪ್ ಬಳಿ ಇಂದು ನಡೆದ ಭೀಕರ ರಸ್ತೆ ಅಪಘಾತದಲ್ಲಿ ಗಾಜು ತುಂಬಿದ ಲಾರಿ ಪಲ್ಟಿಯಾಗಿದ್ದು, ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಘಟನೆ ವಿವರ:

ಗಾಯಗೊಂಡವರನ್ನು ಹೊಸೂರು ಗ್ರಾಮದ ಅಯ್ಯಣ್ಣ ಮತ್ತು ಅಮರೇಶ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಯುವಕರು ಸಂಬಂಧಿಕರಿಗೆ ಲಗ್ನಪತ್ರಿಕೆ ನೀಡಿ ಸಿರವಾರದಿಂದ ರಾಯಚೂರು ಕಡೆಗೆ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಸೀತಾನಗರ ಕ್ಯಾಂಪ್ ಬಳಿ ಲಾರಿಯೊಂದು ಗಾಜನ್ನು ಅನ್‌ಲೋಡ್ ಮಾಡುವ ಸಿದ್ಧತೆ ನಡೆಸಿತ್ತು. ಇದೇ ವೇಳೆ ವೇಗವಾಗಿ ಬಂದ ಬೈಕ್ ಲಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಲಾರಿ ಚಾಲಕನ ನಿಯಂತ್ರಣ ತಪ್ಪಿ, ರಸ್ತೆಯಲ್ಲೇ ಪಲ್ಟಿಯಾಗಿದೆ.

ಲಾರಿಯಲ್ಲಿದ್ದ ಅಪಾರ ಪ್ರಮಾಣದ ಗಾಜು ಒಡೆದು, ರಸ್ತೆಯುದ್ದಕ್ಕೂ ನೀರಿನಂತೆ ಚಲ್ಲಾಪಿಲ್ಲಿಯಾಗಿದೆ. ಬೈಕ್‌ನಲ್ಲಿದ್ದ ಅಯ್ಯಣ್ಣ ಮತ್ತು ಅಮರೇಶ್ ಇಬ್ಬರಿಗೂ ತೀವ್ರ ಗಾಯಗಳಾಗಿದ್ದು, ಕೂಡಲೇ ಅವರನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಿಂದಾಗಿ ರಸ್ತೆಯಲ್ಲಿ ಭಾರೀ ಟ್ರಾಫಿಕ್ ಜಾಮ್ ಉಂಟಾಗಿತ್ತು. ಸಂಚಾರಕ್ಕೆ ಅಡಚಣೆಯಾದ ಕಾರಣ, ವಾಹನ ಸವಾರರು ಬದಿಯ ಜಮೀನುಗಳ ಮೂಲಕ ತಾತ್ಕಾಲಿಕ ರಸ್ತೆಯನ್ನು ಮಾಡಿಕೊಂಡು ಪ್ರಯಾಣ ಮುಂದುವರಿಸಿದರು.

ಈ ಘಟನೆ ಕುರಿತು ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!