ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಹೆಚ್.ಎಂ. ರೇವಣ್ಣ ಅವರ ಪುತ್ರ ಶಶಾಂಕ್ ರೇವಣ್ಣ ಅವರ ಕಾರು ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರೊಬ್ಬರು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಗುಡೇಮಾರನಹಳ್ಳಿ ಬಳಿ ನಡೆದಿದೆ. ಈ ಅಪಘಾತದ ನಂತರ ಶಶಾಂಕ್ ಅವರು ಕಾರಿನೊಂದಿಗೆ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಸ್ಥಳೀಯರು ಬೆನ್ನಟ್ಟಿ ತಡೆದಿದ್ದಾರೆ.
ಘಟನೆಯ ವಿವರ
ಗುರುವಾರ ರಾತ್ರಿ ಸುಮಾರು 10:30ರ ಸುಮಾರಿಗೆ ಗುಡೇಮಾರನಹಳ್ಳಿ ಟೋಲ್‌ನ ನೂರು ಮೀಟರ್ ದೂರದಲ್ಲಿ ಈ ಭೀಕರ ಅಪಘಾತ ಸಂಭವಿಸಿದೆ. ಶಶಾಂಕ್ ಅವರು ಚಲಾಯಿಸುತ್ತಿದ್ದ ಫಾರ್ಚೂನರ್ ಕಾರು, ಮಾಗಡಿ ನಿವಾಸಿ ರಾಜೇಶ್ (23) ಎಂಬುವವರು ಓಡಿಸುತ್ತಿದ್ದ ಬೈಕಿಗೆ ತೀವ್ರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಾಜೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದ ನಂತರ ಶಶಾಂಕ್ ಅವರು ಕಾರನ್ನು ನಿಲ್ಲಿಸದೆ ಮುಂದುವರಿದಾಗ, ಸ್ಥಳೀಯರು ಸುಮಾರು 5 ಕಿಲೋಮೀಟರ್ ದೂರದವರೆಗೆ ಬೆನ್ನಟ್ಟಿ ಹೋಗಿ, ಸನ್ ಫ್ಲವರ್ ಫ್ಯಾಕ್ಟರಿ ಬಳಿ ಕಾರನ್ನು ಅಡ್ಡಗಟ್ಟಿ ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ಶಶಾಂಕ್ ಅವರು, “ನಾನು ಯಾರು ಗೊತ್ತಾ? ಹೆಚ್‌ಎಂ ರೇವಣ್ಣ ಪುತ್ರ” ಎಂದು ಸ್ಥಳೀಯರೊಂದಿಗೆ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.
ನಂತರ, ಕಾರನ್ನು ಬದಿಯಲ್ಲಿ ನಿಲ್ಲಿಸುತ್ತೇನೆ ಎಂದು ಹೇಳಿ ಶಶಾಂಕ್ ಮತ್ತೊಮ್ಮೆ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಕಾರಿನಲ್ಲಿ ಶಶಾಂಕ್ ಜೊತೆಗೆ ರೇವಣ್ಣ ಅವರ ಕುಟುಂಬಸ್ಥರು ಕೂಡ ಇದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಈ “ಹಿಟ್ ಅಂಡ್ ರನ್” ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ, ತಡರಾತ್ರಿ ಫಾರ್ಚೂನರ್ ಕಾರನ್ನು ಕುದೂರು ಪೊಲೀಸ್ ಠಾಣೆಗೆ ತಂದು ನಿಲ್ಲಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

