Monday, October 13, 2025

ಜೈಲಿಗೆ ಡ್ರಗ್ಸ್ ಸಾಗಿಸಲು ಬಿಸ್ಕೆಟ್ ಐಡಿಯಾ! ಸಿಬ್ಬಂದಿ ಜಾಣ್ಮೆಗೆ ಸಿಕ್ಕಿಬಿದ್ರು ಇಬ್ಬರು ಯುವಕರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬನಿಗೆ ನಿಷೇಧಿತ ವಸ್ತುಗಳನ್ನು ತಲುಪಿಸಲು ಯತ್ನಿಸಿದ ಇಬ್ಬರು ಯುವಕರನ್ನು ಜೈಲು ಸಿಬ್ಬಂದಿ ಬಂಧಿಸಿ, ತುಂಗಾ ನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಭದ್ರಾವತಿ ನಗರದ 19 ವರ್ಷದ ರಾಹಿಲ್ ಮತ್ತು ತಸೀರುಲ್ಲಾ ಎಂದು ಗುರುತಿಸಲಾಗಿದೆ. ಈ ಇಬ್ಬರು ಯುವಕರು ಶನಿವಾರ ಸಂಜೆ 4:30ರ ಸುಮಾರಿಗೆ, ಕೈದಿ ಮೊಹಮ್ಮದ್ ಗೌಸ್ ಅಲಿಯಾಸ್ ಜಂಗ್ಲಿ ಎಂಬಾತನನ್ನು ಭೇಟಿ ಮಾಡಲು ಬಂದಿದ್ದರು. ಅವರು ತಂದಿದ್ದ ಮೂರು ಬಿಸ್ಕೆಟ್ ಪ್ಯಾಕೆಟ್‌ಗಳ ಮೇಲೆ ಜೈಲು ಸಿಬ್ಬಂದಿಗೆ ಅನುಮಾನ ಬಂದಿದ್ದು, ಪರಿಶೀಲಿಸಿದಾಗ ಸತ್ಯ ಬಯಲಾಗಿದೆ. ಬಿಸ್ಕೆಟ್ ಪ್ಯಾಕೆಟ್‌ಗಳೊಳಗೆ ಕಪ್ಪು ಗಮ್ ಟೇಪ್‌ನಿಂದ ಸುತ್ತಲ್ಪಟ್ಟ ವಸ್ತುಗಳು ಕಂಡುಬಂದವು. ಅವುಗಳನ್ನು ಬಿಡಿಸಿ ನೋಡಿದಾಗ, ಒಂದು ಗಾಂಜಾ ಪ್ಯಾಕೆಟ್ ಮತ್ತು ಎರಡು ಸಿಗರೇಟ್ ಪ್ಯಾಕೆಟ್‌ಗಳು ಇರುವುದು ದೃಢಪಟ್ಟಿದೆ.

ನಿಷೇಧಿತ ವಸ್ತುಗಳನ್ನು ಜಪ್ತಿ ಮಾಡಿದ ಕಾರಾಗೃಹ ಸಿಬ್ಬಂದಿ, ಆರೋಪಿಗಳನ್ನು ಹೆಚ್ಚಿನ ತನಿಖೆಗಾಗಿ ತುಂಗಾ ನಗರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಈ ಕುರಿತು ಕೇಂದ್ರ ಜೈಲಿನ ಅಧೀಕ್ಷಕ ಡಾ.ರಂಗನಾಥ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಬಂಧಿತ ಯುವಕರನ್ನು ವಿಚಾರಣೆ ನಡೆಸುತ್ತಿದ್ದಾರೆ.

error: Content is protected !!