ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಬ್ಬು ದರ ನಿಗದಿ ಮತ್ತು ಬಾಕಿ ಪಾವತಿಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯಲ್ಲಿ ರೈತರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ. ಜಿಲ್ಲೆಯಾದ್ಯಂತ ಪ್ರಮುಖ ಪಟ್ಟಣಗಳಲ್ಲಿ ಪ್ರತಿಭಟನೆ ಮತ್ತು ಬಂದ್ ವಾತಾವರಣ ನಿರ್ಮಾಣವಾಗಿದ್ದು, ಹಲವು ಕಡೆಗಳಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗಿದೆ.
ಅಥಣಿ, ಹುಕ್ಕೇರಿಯಲ್ಲಿ ಸಂಪೂರ್ಣ ಬಂದ್: ವಾಹನ ಸಂಚಾರ ಸ್ತಬ್ಧ
ಕಬ್ಬಿನ ನ್ಯಾಯಯುತ ಬೆಲೆ ಮತ್ತು ಬಾಕಿ ಪಾವತಿಗೆ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ರೈತರು ಮತ್ತು ಕನ್ನಡಪರ ಸಂಘಟನೆಗಳ ಬೆಂಬಲದೊಂದಿಗೆ ಬಂದ್‌ಗೆ ಕರೆ ನೀಡಲಾಗಿದ್ದು, ಸಂಪೂರ್ಣ ಯಶಸ್ವಿಯಾಗಿದೆ. ಅಲ್ಲದೇ, ಹುಕ್ಕೇರಿ ಪಟ್ಟಣದಲ್ಲೂ ರೈತ ಸಂಘಟನೆಗಳು ಕರೆ ನೀಡಿದ್ದ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಪಟ್ಟಣದ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿವೆ.
ಸ್ವಯಂಪ್ರೇರಿತ ಬೆಂಬಲ: ಅಥಣಿ, ಚಿಕ್ಕೋಡಿ, ಗುರ್ಲಾಪುರ, ಜಾಂಬೋಟಿ, ಗೋಕಾಕ್ ಸೇರಿದಂತೆ ಹಲವು ಕಡೆಗಳಲ್ಲಿ ಅಂಗಡಿ ಮಳಿಗೆಗಳು ಸ್ವಯಂಪ್ರೇರಿತವಾಗಿ ಮುಚ್ಚಲ್ಪಟ್ಟಿವೆ.
ರಸ್ತೆ ತಡೆದು ಆಕ್ರೋಶ: ಗೋಕಾಕ್-ಅಥಣಿ ರಸ್ತೆ ಮತ್ತು ದರೂರ ಹಲ್ಯಾಳ ಸೇತುವೆ ಸೇರಿದಂತೆ ವಿವಿಧೆಡೆ ರೈತರು ರಸ್ತೆ ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಹುಕ್ಕೇರಿಯಲ್ಲಿ ಅಹೋರಾತ್ರಿ ಧರಣಿ: ಹುಕ್ಕೇರಿ ಪಟ್ಟಣದ ಅಡವಿಸಿದ್ದೇಶ್ವರ ಮಠದಿಂದ ಕೋರ್ಟ ವೃತ್ತದ ವರೆಗೆ ಬೃಹತ್ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು. ಬಳಿಕ ಹೆದ್ದಾರಿ ಬಂದ್ ಮಾಡಿ ರೈತರು ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಪೊಲೀಸರು ಪರ್ಯಾಯ ಮಾರ್ಗಗಳ ಮೂಲಕ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.
ಹೆದ್ದಾರಿಗಳಲ್ಲಿ ಮೊಕ್ಕಾಂ: ಟನ್‌ಗೆ ₹3,500 ದರಕ್ಕೆ ಪಟ್ಟು
ಜಿಲ್ಲೆಯಾದ್ಯಂತ ಪ್ರಮುಖ ಹೆದ್ದಾರಿಗಳ ಮೇಲೆ ರೈತರು ಜೆಸಿಬಿ ಮತ್ತು ಬ್ಯಾರಿಕೇಡ್‌ಗಳನ್ನು ಅಳವಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸುತ್ತಿದ್ದಾರೆ. ಶಿವಯೋಗಿ ವೃತ್ತದಲ್ಲಿ ಜತ್ತ ಜಂಬೋಟಿ-ಸಂಕೇಶ್ವರ ಜೇವರ್ಗಿ ರಾಜ್ಯ ಹೆದ್ದಾರಿಯನ್ನು ತಡೆದು ನೂರಾರು ರೈತರು ಪ್ರತಿಭಟನೆ ನಡೆಸಿದರು. ಬಾಗಲಕೋಟೆ-ನಿಪ್ಪಾಣಿ ಹೆದ್ದಾರಿಯನ್ನೂ ತಡೆದು ಪ್ರತಿಭಟನೆ ಮುಂದುವರಿದಿದ್ದು, ರೈತರು ಪ್ರತಿ ಟನ್ ಕಬ್ಬಿಗೆ ₹3,500 ದರ ನಿಗದಿ ಮಾಡುವಂತೆ ಸರ್ಕಾರದ ಮೇಲೆ ಒತ್ತಾಯ ಹೇರಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷರಿಂದ ಪ್ರತಿಭಟನೆಗೆ ಸಾಥ್
ಪ್ರತಿಭಟನಾ ಸ್ಥಳಗಳಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಆಗಮಿಸಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿದರು. ಪ್ರತಿಭಟನಾ ನಿರತ ರೈತರಿಗೆ ಸಾಥ್ ನೀಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದರು.

