ಹೊಸದಿಗಂತ ವರದಿ ಹುಬ್ಬಳ್ಳಿ:
ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಘಟಕದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಇಲ್ಲಿಯ ಕೇಶ್ವಾಪುರ ಪೊಲೀಸ್ ಠಾಣೆಯ ಎದುರು ಸಮಾವೇಶ ಗೊಂಡ ಪ್ರತಿಭಟನಾಕಾರರು ಪೊಲೀಸ್ ಇಲಾಖೆ, ರಾಜ್ಯ ಸರ್ಕಾರ ಹಾಗೂ ಕಾಂಗ್ರೆಸ್ ಪಾಲಿಕೆ ಸದಸ್ಯರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ರಾಜೇಶ್ವರಿ ಸಾಲಗಟ್ಟಿ ಮಾತನಾಡಿ, ಮಹಿಳೆಯೊಬ್ಬರಿಗೆ ಅನ್ಯಾಯವಾಗಿದೆ. ಪಾಲಿಕೆ ಸದಸ್ಯರ ಕುಮ್ಮಕ್ಕಿಗೆ ಮಣಿದ ಪೊಲೀಸರು ಮಹಿಳೆಯನ್ನು ವಿವಸ್ತ್ರಗೊಳಿಸಿ ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ. ಕುಮ್ಮಕ್ಕು ನೀಡಿದ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಅವರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಮಹಿಳೆಯರು ಸ್ವಾವಲಂಬಿ ಮಾಡಲು ಗ್ಯಾರಂಟಿ ನೀಡುತ್ತಿದ್ದು, ರಕ್ಷಣೆ ಇಲ್ಲವಾದರೆ ಗ್ಯಾರಂಟಿ ತೆಗೆದುಕೊಂಡು ಏನು ಮಾಡಬೇಕು. ಮಹಿಳಾ ಆಯೋಗ ಸ್ವ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು. ಪೊಲೀಸ್ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ನಿಶನಗೌಡ, ರೂಪಾ ಶೆಟ್ಟಿ, ಉಮಾ ಮುಕುಂದ, ಜಿಲ್ಲಾ ಅಧ್ಯಕ್ಷ ಸೀಮಾ ಲದ್ವಾ, ಅಕ್ಕ ಮಹಾದೇವಿ ಹೆಗಡೆ, ದುರ್ಗಮ್ಮ ಬಿಜವಾಡ, ಚಂದ್ರಿಕಾ ಮೇಸ್ತ್ರಿ, ಶಿವು ಮೆಣಸಿನಕಾಯಿ, ಮಂಜುನಾಥ್ ಕಾಟಕರ, ನಾರಾಯಣ ಜರತಾರಘರ ಇದ್ದರು.
ಕಾರ್ಯಕರ್ತೆ ಮೇಲೆ ಹಲ್ಲೆ ಖಂಡಿಸಿ ಹುಬ್ಬಳ್ಳಿಯಲ್ಲಿ ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಘಟಕದಿಂದ ಪ್ರತಿಭಟನೆ

