March 15, 2026
Sunday, March 15, 2026
spot_img

ಶೀಘ್ರ ಬಿಜೆಪಿ- ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ ರಚನೆ: ಬಿ.ವೈ. ವಿಜಯೇಂದ್ರ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಮಂಗಳವಾರ ಭೇಟಿ ಮಾಡಿ ದೀಪಾವಳಿ ಹಬ್ಬದ ಶುಭಾಶಯ ಕೋರಿದರು.

ಬಳಿಕ ಮಾಧ್ಯಮಗಳ ಜತೆ ಮಾತನಾಡಿ, ಬಿಜೆಪಿ- ಜೆಡಿಎಸ್ ಪಕ್ಷಗಳ ಸಮನ್ವಯ ಸಮಿತಿ ರಚನೆ ಕುರಿತು ಸಲಹೆಗಳನ್ನು ಕೇಳಿದ್ದೇನೆ. ಗ್ರೇಟರ್ ಬೆಂಗಳೂರು ಚುನಾವಣೆಗಳು ನಡೆಯಲಿದ್ದು, ಬೆಂಗಳೂರಿಗೆ ಸೀಮಿತವಾಗಿ ಒಂದು ಸಮನ್ವಯ ಸಮಿತಿ ಮಾಡೋಣ ಹಾಗೂ ರಾಜ್ಯಕ್ಕೆ ಸಂಬಂಧಿಸಿ ಮತ್ತೊಂದು ಸಮನ್ವಯ ಸಮಿತಿ ಮಾಡುವ ಸಲಹೆಯನ್ನು ಎಚ್.ಡಿ. ಕುಮಾರಸ್ವಾಮಿ ಅವರು ನೀಡಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿ ಹದಗೆಟ್ಟಿದೆ. ಬೆಂಗಳೂರು, ರಾಜ್ಯದ ಪರಿಸ್ಥಿತಿ ಹದಗೆಟ್ಟಿದೆ. ಅಭಿವೃದ್ಧಿ ಇಲ್ಲದೇ ಜನರು ಹಿಡಿಶಾಪ ಹಾಕುತ್ತಿದ್ದಾರೆ. ಬೆಂಗಳೂರು ಮಹಾನಗರದ ಅವ್ಯವಸ್ಥೆಯನ್ನು ತಾವೇ ನೋಡುತ್ತಿದ್ದೀರಿ ಎಂದು ಹೇಳಿದರು.

ರಾಜ್ಯ ಸರ್ಕಾರ, ಸಚಿವರು ಅಹಂಕಾರದಿಂದ ಮೆರೆಯುತ್ತಿದ್ದಾರೆ. ಮೋಹನ್‍ದಾಸ್ ಪೈ, ಕಿರಣ್ ಮಜುಂದಾರ್ ಷಾ ಅವರಂಥ ಹಿರಿಯರು ಬೆಂಗಳೂರಿನ ಬಗ್ಗೆ ಮತ್ತು ರಸ್ತೆಗಳ ಕುರಿತು ಸಲಹೆ ನೀಡಿದರೆ, ಆ ಸಲಹೆಗಳನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅಂಥ ಹಿರಿಯರನ್ನು ಸ್ವತಃ ಸಚಿವರೇ ನಿಂದಿಸುತ್ತಿದ್ದಾರೆ. ಇದು ರಾಜ್ಯ ಸರ್ಕಾರಕ್ಕೆ ಶೋಭೆ ತರುವುದಿಲ್ಲ ಎಂದು ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದರು.

ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಇದೇ ರೀತಿ ಟೀಕೆ, ಸಲಹೆಗಳು ಬಂದಿದ್ದವು. ಟೀಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಂಡಿದ್ದರು ಎಂದು ತಿಳಿಸಿದರು.

ಇಲ್ಲಿ ತುಘಲಕ್ ಸರ್ಕಾರ ನಡೆಯುತ್ತಿದೆಯೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಯಾವ ರೀತಿ ಚರ್ಚೆ ನಡೆಯುತ್ತಿದೆ? ಮೊನ್ನೆ ದಿನ ನಮ್ಮ ಸಂಸದ ರಾಘವೇಂದ್ರ ಅವರು ಇಲ್ಲಿ ಹಣ ಸಂಗ್ರಹಿಸಿ ಬಿಹಾರ ಚುನಾವಣೆಗೆ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಸಚಿವರಾದಿಯಾಗಿ ಎಲ್ಲರೂ ಸಾಕ್ಷಿ ಕೊಡಿ ಎಂದು ಕೇಳಿದ್ದಾರೆ. ಯಾಕೆ ಸ್ವಾಮೀ, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್‌ ಅವರಿಗೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಮರೆತು ಹೋಯಿತೇ ಎಂದು ಪ್ರಶ್ನಿಸಿದರು.

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ಹಣವನ್ನು ತೆಲಂಗಾಣಕ್ಕೆ ತೆಗೆದುಕೊಂಡು ಹೋಗಿ ಸಾವಿರಾರು ಬೇನಾಮಿ ಖಾತೆ ತೆರೆದು ಹಣ ಪಡೆದು ಚಿನ್ನ ಖರೀದಿಸಲಾಗಿತ್ತು. ಲೋಕಸಭಾ ಚುನಾವಣೆಯಲ್ಲೂ ಬಳಸಲಾಗಿತ್ತು. ಇದನ್ನು ಜಾರಿ ನಿರ್ದೇಶನಾಲಯವು (ಇ.ಡಿ) ನೇರವಾಗಿ ಹೇಳಿದೆ ಎಂದು ಅವರು ಆರೋಪಿಸಿದರು.

ಚಿತ್ತಾಪುರದ ಕುರಿತು ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಿಯಾಂಕ್ ಖರ್ಗೆಯವರಿಗೆ ಯಾಕೆ ಈ ರೀತಿ ದುರ್ಬುದ್ಧಿ ಬಂತೆಂದು ಗೊತ್ತಿಲ್ಲ. ಅನಾವಶ್ಯಕವಾಗಿ ಆರೆಸ್ಸೆಸ್ ಬಗ್ಗೆ ಟೀಕಿಸುವುದು ಸರಿಯಲ್ಲ. ಇದು ಪ್ರಚಾರ ಗಿಟ್ಟಿಸಿಕೊಳ್ಳುವ ತಂತ್ರವೇ ಅಥವಾ ಮುಖ್ಯಮಂತ್ರಿ ಕುರ್ಚಿಗೆ ಟವೆಲ್ ಹಾಕುವ ತಂತ್ರವೇ ಗೊತ್ತಿಲ್ಲ; ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದಂತೆ ಪ್ರಿಯಾಂಕ್ ಖರ್ಗೆಯವರು ಇವತ್ತು ಈ ವಿಚಾರದಲ್ಲಿ ಏಕಾಂಗಿಯಾಗಿದ್ದಾರೆ ಎಂದು ಹೇಳಿದರು. ಆಡಳಿತ ಪಕ್ಷದ ವೈಫಲ್ಯ ಮುಚ್ಚಿ ಹಾಕಿಕೊಳ್ಳುವ ಸಲುವಾಗಿ ಈ ರೀತಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ನ.2ರಂದು ಚಿತ್ತಾಪುರದಲ್ಲಿ ಯಶಸ್ವಿಯಾಗಿ ಪಥಸಂಚಲನ ಆಗಲಿದೆ. ಆ ವಿಷಯದಲ್ಲಿ ಗೊಂದಲವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ತಿಳಿಸಿದರು.‌

ಈ ಸಂದರ್ಭದಲ್ಲಿ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಕೃಷ್ಣಪ್ಪ, ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಸಿ.ಕೆ. ರಾಮಮೂರ್ತಿ, ಮಾಜಿ ಶಾಸಕ ಎ. ಮಂಜುನಾಥ್ ಉಪಸ್ಥಿತರಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !