ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಮು ಭಾವನೆ ಕೆರಳಿಸಿ, ಜನರನ್ನು ವಿಭಜಿಸಿ, ಬೆಂಕಿ ಹಚ್ಚುವುದೇ ಬಿಜೆಪಿ ನಾಯಕರ ಕೆಲಸ. ಅವರಿಗೆ ಅಭಿವೃದ್ಧಿ ಬಗ್ಗೆ ಚಿಂತೆ ಇಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮದ್ದೂರು ಗಣೇಶ ವಿಸರ್ಜನೆ ವೇಳೆ ನಡೆದಿರುವ ಕಲ್ಲು ತೂರಾಟ ಹಾಗೂ ಅದರ ಬೆನ್ನಲ್ಲೇ ಬಿಜೆಪಿ ನಾಯಕರು ಮದ್ದೂರಿಗೆ ತೆರಳಿರುವ ಬಗ್ಗೆ ಪ್ರತಿಕ್ರಿಯಿಸಿದರು. ಈ ಪ್ರಕರಣದ ಬಗ್ಗೆ ಈಗಾಗಲೇ ಸಿಎಂ, ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಪ್ರತಿಕ್ರಿಯೆ ನೀಡಿದ್ದಾರೆ. ಹೊರ ರಾಜ್ಯಕ್ಕೆ ಹೋಗಿದ್ದ ಹಿನ್ನೆಲೆಯಲ್ಲಿ ನನಗೆ ಈ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ನನಗೆ ಸಂಪೂರ್ಣ ಮಾಹಿತಿ ಸಿಗದೇ ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ತಿಳಿಸಿದರು.
ಬಿಜೆಪಿಯವರಿಗೆ ರಾಜಕಾರಣ ಮಾಡುವುದು ಬಿಟ್ಟು ಬೇರೆ ಕೆಲಸ ಏನಿದೆ? ಅವರು ದೆಹಲಿಗೆ ಹೋಗಿ ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲು, ನರೇಗಾ ಅನುದಾನ, ಮೇಕೆದಾಟು, ಮಹದಾಯಿ ನೀರಾವರಿ ಯೋಜನೆಗಳಿಗೆ ಅನುಮತಿ ತೆಗೆದುಕೊಂಡು ಬರಲಿ ಎಂದು ಸವಾಲೆಸೆದರು.