ಹೊಸ ದಿಗಂತ ವರದಿ, ಬೀದರ್:
ನಗರದ ಐತಿಹಾಸಿಕ ಪಾಪನಾಶ ಶಿವಲಿಂಗ ದೇವಸ್ಥಾನದಲ್ಲಿ ಪೂಜೆ, ಅಭಿಷೇಕ ಮಾಡಲು ಅವಕಾಶ ನೀಡಬೇಕೆಂದು ಬಿಜೆಪಿ ಕಾರ್ಯಕರ್ತರು ಶನಿವಾರ ದೇಗುಲದ ಪ್ರವೇಶ ದ್ವಾರದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ, ಸಂಸದ ಸಾಗರ ಖಂಡ್ರೆ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ಪೂಜೆ ಮಾಡಿದ ನಂತರವೇ ಸ್ಥಳದಿಂದ ಹೋಗುತ್ತೇವೆ ಎಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದಿದ್ದರು.
ಶನಿವಾರ ಬೆಳಿಗ್ಗೆ ಪಾಪನಾಶ ದೇವಸ್ಥಾನದ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡುವ ಕಾರ್ಯಕ್ರಮ ನಿಗದಿಯಾಗಿದೆ ಕಾಮಗಾರಿ ಮುಂಚೆ ಪಾಪನಾಶ ದೇವಸ್ಥಾನದಲ್ಲಿ ಪೂಜೆ ನಡೆಸುವುದಾಗಿ ಬಿಜೆಪಿ ಮುಖಂಡರು ಮೊದಲೇ ತಿಳಿಸಿದ್ದರು.
ಅದರಂತೆಯೇ ಬೆಳಿಗ್ಗೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ತೆರಳುವ ವೇಳೆ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಪೊಲೀಸರು ತಡೆದ ಕಾರಣ ಬಿಜೆಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗಲಾಟೆ ಆಗದಂತೆ ತಡೆಯಲು ನಂತರ ಕೆಲ ಮುಖಂಡರನ್ನು ವಶಕ್ಕೆ ಪಡೆದರು.
ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಮಾತನಾಡಿ, ‘ಪಾಪನಾಶ ದೇವಸ್ಥಾನಕ್ಕೆ ಪೂಜೆ ಸಲ್ಲಿಸಲು ಬಿಡುತ್ತಿಲ್ಲ. ಜಿಲ್ಲೆಯಲ್ಲಿ ತುಘಲಕ್ ದರ್ಬಾರ್ ನಡೆಯುತ್ತಿದೆ. ಜಿಲ್ಲಾಡಳಿತ ಸಹ ಹಾಗೂ ಜಿಲ್ಲಾಧಿಕಾರಿ ನ್ಯಾಯಯುತವಾಗಿ ವರ್ತಿಸಬೇಕಿತ್ತು ಆದರೆ ಇವರ ನಡವಳಿಕೆ ಸಂಪೂರ್ಣ ಕಾಂಗ್ರೆಸ್ ಸರ್ಕಾರದೊಂದಿಗೆ ಕೈಜೋಡಿಸಿದಂತಿದೆ. ನಮಗೆ ಪೂಜೆ ಮಾಡಲು ಬಿಡದಿದ್ದರೆ ನಾವೂ ಅವರಿಗೆ ಕಾಮಗಾರಿ ಚಾಲನೆ ಮಾಡಲು ಬಿಡುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರು
ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಶಾಸಕರಾದ ಡಾ.ಶೈಲೇಂದ್ರ ಕೆ. ಬೆಲ್ದಾಳೆ, ಡಾ.ಸಿದ್ದಲಿಂಗಪ್ಪ ಪಾಟೀಲ್, ಎಂ.ಜಿ. ಮುಳೆ ಮುಖಂಡರಾದ ಪ್ರಕಾಶ್ ಖಂಡ್ರೆ, ಶಶಿಧರ ಹೊಸಳ್ಳಿ ಸೇರಿದಂತೆ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕೇಂದ್ರದ ‘ಪ್ರಸಾದ’ ಯೋಜನೆಯಡಿ ₹22.41 ಕೋಟಿ ಮೊತ್ತದ ಯೋಜನೆಗೆ 2024ರ ಮಾರ್ಚ್ 7ರಂದು ಪ್ರಧಾನಿ ನರೇಂದ್ರ ಮೋದಿ ವರ್ಚುವಲ್ ಮೂಲಕ ದೇವಸ್ಥಾನದ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಪುನಃ ಶಂಕುಸ್ಥಾಪನೆ ಮಾಡಬಾರದು ಎನ್ನುವುದು ಬಿಜೆಪಿ ವಿರೋಧಿಸುತ್ತಿದೆ.
ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಬೆಂಬಲಿಗರು ಈಶ್ವರ ಖಂಡ್ರೆ, ಸಾಗರ ಖಂಡ್ರೆ ಅವರಿಗೆ ಜಯವಾಗಲಿ ಎಂದು ಘೋಷಣೆ ಕೂಗುತ್ತಾ ಪಾಪನಾಶ ದೇವಸ್ಥಾನದತ್ತ ಕಾಲ್ನಡಿಗೆ ಮೂಲಕ ತೆರಳಿದರು.



