Wednesday, December 10, 2025

ರಾಜ್ಯ ಸರಕಾರ ವಿರುದ್ಧ ಗುಡುಗಿದ ಬಿಜೆಪಿ: ನಾಳೆ ಸುವರ್ಣ ಸೌಧಕ್ಕೆ ಮುತ್ತಿಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭ್ರಷ್ಟ ಕಾಂಗ್ರೆಸ್ ಸರ್ಕಾರದ ರೈತವಿರೋಧಿ ನೀತಿಯನ್ನು ಖಂಡಿಸಿ ನಾಳೆ ಬೆಳಿಗ್ಗೆ ಇಲ್ಲಿ ರೈತರ ಬೃಹತ್ ಪ್ರತಿಭಟನೆ ನಡೆಸಿ, ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.

ನಾಳೆ ನಡೆಯುವ ಹೋರಾಟದ ಸ್ಥಳ ಮಾಲಿನಿ ಸಿಟಿ ಮೈದಾನಕ್ಕೆ ಇಂದು ಭೇಟಿ ನೀಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿದರು. ಬೆಳಗಾವಿ ಜಿಲ್ಲೆಯ ಶಾಸಕರು, ವಿಧಾನಪರಿಷತ್ ಸದಸ್ಯರು, ಬೆಳಗಾವಿ, ಅಕ್ಕಪಕ್ಕದ ಜಿಲ್ಲೆಗಳ ರೈತರು ಭಾಗವಹಿಸುತ್ತಾರೆ ಎಂದರು.

ಪ್ರತಿಭಟನೆಯಲ್ಲಿ ಕನಿಷ್ಠ 20-25 ಸಾವಿರ ಜನರು ಸೇರುತ್ತಾರೆ ಈ ಸರಕಾರ ಕಣ್ಣಿದ್ದೂ ಕುರುಡನಂತೆ, ಕಿವಿಯಿದ್ದೂ ಕಿವುಡನಂತೆ ನಟಿಸುತ್ತಿದೆ ಎಂದು ಅವರು ಟೀಕಿಸಿದರು. ಪರಿಹಾರದ ವಿಚಾರ ಕೇಳಿದರೆ ಕೇಂದ್ರದ ಮೇಲೆ ಆರೋಪಿಸುತ್ತಾರೆ ಎಂದು ಆಕ್ಷೇಪಿಸಿದರು. ರಾಜ್ಯ ಸರಕಾರಕ್ಕೆ ಜವಾಬ್ದಾರಿಯೇ ಇಲ್ಲ ಎಂದು ದೂರಿದರು.

ಕಬ್ಬು ಬೆಳೆಗಾರರ ಸಮಸ್ಯೆ ಇನ್ನೂ ಸಂಪೂರ್ಣವಾಗಿ ಇತ್ಯರ್ಥ ಆಗಿಲ್ಲ. ಕೇಂದ್ರವು ಮೆಕ್ಕೆ ಜೋಳಕ್ಕೆ 2400 ರೂ. ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ರಾಜ್ಯ ಸರಕಾರವು ಸೂಕ್ತ ಸಮಯದಲ್ಲಿ ಖರೀದಿ ಕೇಂದ್ರ ತೆರೆಯದ ಕಾರಣ ಮೆಕ್ಕೆ ಜೋಳ ಬೆಳೆಯುವ ರೈತರು 1500, 1600 ರೂಪಾಯಿಗೆ ಮೆಕ್ಕೆ ಜೋಳ ಮಾರಾಟ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ಹತ್ತಿ, ತೊಗರಿ ಮೊದಲಾದ ರೈತರ ಸಮಸ್ಯೆ ಚರ್ಚೆ ನಡೆಸಲಿದ್ದೇವೆ ಎಂದು ತಿಳಿಸಿದರು.

ಮುಖ್ಯಮಂತ್ರಿ ಗಾದಿಗೆ ಕಚ್ಚಾಟದ ಕರಿನೆರಳು ರಾಜ್ಯದ ಮೇಲೆ ಬಿದ್ದಿದೆ. ರಾಜ್ಯ ಸರಕಾರವು ತನ್ನ ವೈಫಲ್ಯವನ್ನು ಮುಚ್ಚಿ ಹಾಕಿಕೊಳ್ಳಲು ಕೇಂದ್ರ ಸರಕಾರವನ್ನು ದೂರುವ ಪರಿಪಾಠವನ್ನು ಮುಂದುವರೆಸಿದೆ ಎಂದು ಟೀಕಿಸಿದರು. ಇವೆಲ್ಲವನ್ನೂ ಸದನದಲ್ಲಿ ಚರ್ಚಿಸುತ್ತೇವೆ ಎಂದು ಹೇಳಿದರು.

error: Content is protected !!