ಹೊಸದಿಗಂತ ಹುಬ್ಬಳ್ಳಿ:
ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಅವರ ಮೇಲೆ ಪೊಲೀಸ್ ಸಿಬ್ಬಂದಿ ಅಮಾನುಷವಾಗಿ ದೌರ್ಜನ್ಯ ನಡೆಸಿದ್ದಾರೆ ಎಂದು ಆರೋಪಿಸಿ, ಬಿಜೆಪಿ ಜಿಲ್ಲಾ ಮಹಿಳಾ ಘಟಕ ನಡೆಸುತ್ತಿರುವ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೇಶ್ವಾಪುರ ಪೊಲೀಸ್ ಠಾಣೆಯ ಎದುರು ಜಮಾಯಿಸಿರುವ ಕಾರ್ಯಕರ್ತೆಯರನ್ನು ಸಮಾಧಾನಪಡಿಸಲು ಪೊಲೀಸರು ನಡೆಸಿದ ಸಂಧಾನ ಯತ್ನ ಸಂಪೂರ್ಣ ವಿಫಲವಾಗಿದ್ದು, ಪ್ರತಿಭಟನಾಕಾರರು ತಮ್ಮ ಪಟ್ಟಿನಿಂದ ಹಿಂದೆ ಸರಿಯುತ್ತಿಲ್ಲ.
ಪ್ರತಿಭಟನಾ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮೇಯರ್ ಜ್ಯೋತಿ ಪಾಟೀಲ ಅವರು ಪೊಲೀಸ್ ಇಲಾಖೆಯ ವಿರುದ್ಧ ಕಿಡಿಕಾರಿದರು. “ಪೊಲೀಸರು ಮಹಿಳೆಯೊಬ್ಬರ ಮೇಲೆ ನಡೆದುಕೊಂಡ ರೀತಿ ಅತ್ಯಂತ ಖಂಡನೀಯ. ಒಬ್ಬ ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ ಅವಮಾನಿಸಲಾಗಿದೆ ಎನ್ನುವುದು ಕೇಳಲೇ ಅಸಹ್ಯಕರ. ತಾಯಿ, ತಂಗಿ, ಸಹೋದರಿಯಂತೆ ಗೌರವಿಸಬೇಕಾದ ಪೊಲೀಸರೇ ಈ ಕೃತ್ಯದಲ್ಲಿ ಭಾಗಿಯಾಗಿರುವುದು ನಾಚಿಕೆಗೇಡು,” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಘಟನೆಯ ಹಿಂದೆ ಕಾಂಗ್ರೆಸ್ ಪಾಲಿಕೆ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಅವರ ಕೈವಾಡವಿದೆ ಎಂದು ಆರೋಪಿಸಿದ ಮೇಯರ್, “ಸಂಬಂಧಪಟ್ಟ ಕಾಂಗ್ರೆಸ್ ಸದಸ್ಯೆ ಹಾಗೂ ಘಟನೆಯಲ್ಲಿ ಭಾಗಿಯಾಗಿರುವ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ತಕ್ಷಣವೇ ಬಂಧಿಸಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲದು,” ಎಂದು ಎಚ್ಚರಿಕೆ ನೀಡಿದರು.
“ರಾಜ್ಯ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಪೊಲೀಸ್ ಇಲಾಖೆ ಯಾರ ಒತ್ತಡಕ್ಕೆ ಮಣಿದು ಈ ರೀತಿ ವರ್ತಿಸುತ್ತಿದೆ? ಪಾಲಿಕೆ ಸದಸ್ಯರ ಮಾತು ಕೇಳಿ ಪೊಲೀಸರು ಇಂತಹ ನೀಚ ಕೃತ್ಯಕ್ಕೆ ಕೈಹಾಕಿರುವುದು ವ್ಯವಸ್ಥೆಯ ದುರಂತ,” ಎಂದು ಮೇಯರ್ ಜ್ಯೋತಿ ಪಾಟೀಲ ಕಿಡಿಕಾರಿದರು. ಸದ್ಯ ಕೇಶ್ವಾಪುರ ಠಾಣೆ ಮುಂಭಾಗ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪ್ರತಿಭಟನೆ ಮುಂದುವರೆದಿದೆ.

