ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಸರ್ಕಾರವು ನರೇಗಾ ಯೋಜನೆಯ ಹೆಸರು ಬದಲಾವಣೆ ಮಾಡಿರುವುದು ಮತ್ತು ಗಾಂಧೀಜಿಯವರ ಹೆಸರನ್ನು ಕೈಬಿಟ್ಟಿರುವುದರ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಹಿಂದೂತ್ವ ಮತ್ತು ಆಡಳಿತ ವೈಖರಿಯನ್ನು ಕಟುವಾಗಿ ಟೀಕಿಸಿದರು.
ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಬದಲಾಯಿಸಿ ‘ಜಿ ರಾಮ್ ಜೀ’ ಎಂದು ಮರುನಾಮಕರಣ ಮಾಡಿರುವುದು ಬಡವರಿಗೆ ಮಾಡಿದ ದ್ರೋಹ ಎಂದು ಸಚಿವರು ಕರೆದಿದ್ದಾರೆ. ಈ ಹಿಂದೆ ಕೇಂದ್ರವೇ ಶೇ. 100ರಷ್ಟು ಹಣ ನೀಡುತ್ತಿತ್ತು, ಆದರೆ ಈಗ ರಾಜ್ಯ ಸರ್ಕಾರ ಶೇ. 40ರಷ್ಟು ಹಣ ಭರಿಸಬೇಕಿದೆ. ಅಲ್ಲದೆ, ಕೇಂದ್ರ ಸೂಚಿಸಿದ ಕಡೆ ಮಾತ್ರ ಕೆಲಸ ಮಾಡಬೇಕೆಂಬ ನಿಯಮದಿಂದಾಗಿ ಯೋಜನೆಯ ಮೂಲ ಉದ್ದೇಶವೇ ಹಳ್ಳ ಹಿಡಿಯುತ್ತಿದೆ ಎಂದು ಅವರು ಆರೋಪಿಸಿದರು.
“ಬಿಜೆಪಿಯವರು ಕೇವಲ ಚುನಾವಣೆ ಮತ್ತು ಓಟಿಗಾಗಿ ರಾಮನ ಜಪ ಮಾಡುತ್ತಾರೆ. ಅವರು ನಕಲಿ ರಾಮಭಕ್ತರು ಮತ್ತು ನಕಲಿ ಹಿಂದೂಗಳು. ದೇಶದ ಬಹುತೇಕ ದೇವಸ್ಥಾನಗಳನ್ನು ಕಟ್ಟಿದ್ದು ಕಾಂಗ್ರೆಸ್‌ನವರು. ನಾವೇ ನಿಜವಾದ ರಾಮಭಕ್ತರು,” ಎಂದು ತಿರುಗೇಟು ನೀಡಿದರು.
ಮಹಾತ್ಮ ಗಾಂಧೀಜಿಯವರ ಹೆಸರನ್ನು ಯೋಜನೆಯಿಂದ ತೆಗೆದುಹಾಕಿರುವುದು ಬಿಜೆಪಿಯ ಅಸಹನೆ ಮತ್ತು ದ್ವೇಷವನ್ನು ತೋರಿಸುತ್ತದೆ. “ಗಾಂಧೀಜಿಯನ್ನು ಕೊಂದವರೇ ಇವರು. ಗಾಂಧಿ ತತ್ವಗಳನ್ನು ಅಳವಡಿಸಿಕೊಳ್ಳುವ ಬದಲು ಅವರ ಹೆಸರನ್ನು ಅಳಿಸಲು ಪ್ರಯತ್ನಿಸುತ್ತಿರುವುದು ಬಿಜೆಪಿಯ ದುಷ್ಟತನಕ್ಕೆ ಸಾಕ್ಷಿ,” ಎಂದು ಸಚಿವರು ಕಿಡಿಕಾರಿದರು.


