ಹೊಸದಿಗಂತ ಚಿತ್ರದುರ್ಗ:
ರಾಜ್ಯದ ಕಾಂಗ್ರೆಸ್ ಸರ್ಕಾರದ ಆಡಳಿತ ವೈಫಲ್ಯ ಹಾಗೂ ಮಿತಿಮೀರಿರುವ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಹಂತ-ಹಂತವಾಗಿ ಹೋರಾಟ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಎಚ್ಚರಿಕೆ ನೀಡಿದರು.
ಬುಧವಾರ ಕೋಟೆನಾಡಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ, ಜನವರಿ 17 ರಂದು ಬಳ್ಳಾರಿಯಿಂದ ಮೊದಲ ಹಂತದ ಬೃಹತ್ ಪ್ರತಿಭಟನೆಗೆ ಚಾಲನೆ ನೀಡಲಾಗುವುದು ಎಂದು ಅವರು ಘೋಷಿಸಿದರು.
ಮಹಾತ್ಮ ಗಾಂಧೀಜಿಯವರ ‘ಗ್ರಾಮ ಸ್ವರಾಜ್ಯ’ದ ಕನಸನ್ನು ನನಸು ಮಾಡಲು ‘ವಿಬಿ ಜಿ ರಾಮ್ ಜಿ’ ಯೋಜನೆ ಪೂರಕವಾಗಿದೆ.
ಈ ಹಿಂದೆ ಉದ್ಯೋಗ ಖಾತರಿ (MGNREGA) ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿತ್ತು. ಆದರೆ ಈಗ ಕಾರ್ಮಿಕರ ಖಾತೆಗೆ ನೇರವಾಗಿ ಹಣ ಜಮೆಯಾಗುವುದರಿಂದ ಮಧ್ಯವರ್ತಿಗಳ ಹಾವಳಿ ತಪ್ಪಲಿದೆ.
ಹಳೆಯ ಕಾಮಗಾರಿಗಳನ್ನೇ ಹೊಸದೆಂದು ತೋರಿಸಿ ಹಣ ಲೂಟಿ ಮಾಡುತ್ತಿದ್ದ ಪದ್ಧತಿಗೆ ಬ್ರೇಕ್ ಬಿದ್ದಿದೆ. ಇನ್ನು ಮುಂದೆ ಗ್ರಾಮ ಪಂಚಾಯತಿ ಮಟ್ಟದಲ್ಲೇ ಕಾಮಗಾರಿಗಳ ನಿರ್ಧಾರವಾಗಲಿದೆ ಎಂದು ವಿವರಿಸಿದರು.
ಜರ್ಮನಿ ಚಾನ್ಸಲರ್ ಕರ್ನಾಟಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಅವರೊಂದಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚಿಸುವ ಬದಲು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ರಾಹುಲ್ ಗಾಂಧಿಯವರನ್ನು ಭೇಟಿ ಮಾಡಿದ್ದನ್ನು ವಿಜಯೇಂದ್ರ ಟೀಕಿಸಿದರು. “ರಾಜ್ಯದ ಹಿತಕ್ಕಿಂತ ಕುರ್ಚಿ ಉಳಿಸಿಕೊಳ್ಳುವುದೇ ಅವರಿಗೆ ಮುಖ್ಯವಾಗಿದೆ” ಎಂದು ಅವರು ವ್ಯಂಗ್ಯವಾಡಿದರು.


