ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಭದ್ರಾ ಅಭಯಾರಣ್ಯದಲ್ಲಿ ಅಪರೂಪದ ವನ್ಯಜೀವಿಗಳ ದರ್ಶನ ಪ್ರವಾಸಿಗರ ಪಾಲಿಗೆ ಹಬ್ಬವಾಗಿ ಪರಿಣಮಿಸಿದೆ. ಕಾಡಿನ ದಟ್ಟ ಹಸಿರಿನ ನಡುವೆ ಬ್ಲಾಕ್ ಪ್ಯಾಂಥರ್ ಹಾಗೂ ಚಿರತೆಯೊಂದು ಒಟ್ಟಾಗಿ ಕಾಣಿಸಿಕೊಂಡು ಅಚ್ಚರಿ ಜತೆಗೆ ಶಾಕ್ ಕೂಡ ಆಗಿದೆ.
ಕಳೆದ ಹತ್ತು ದಿನಗಳಿಂದ ಪದೇಪದೇ ಪ್ರವಾಸಿಗರ ಕಣ್ಣಿಗೆ ದರ್ಶನವನ್ನು ಈ ಎರಡು ಚಿರತೆಗಳು ನೀಡುತ್ತಿವೆ. ಇದರಿಂದ ಕಾಡಿನೊಳಗೆ ಪ್ರವಾಸ ಮಾಡುತ್ತಿರುವ ಪ್ರವಾಸಿಗರು ಸಂತಸಗೊಂಡಿದ್ದಾರೆ. ಸಾಮಾನ್ಯವಾಗಿ ಒಂಟಿಯಾಗಿ ಸಂಚರಿಸುವ ಈ ಪ್ರಾಣಿಗಳು ಇಲ್ಲಿ ಜೊತೆಯಾಗಿ ಸಾಗುತ್ತಿರುವ ದೃಶ್ಯ ಪ್ರವಾಸಿಗರ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರು ಬೆರಗಾಗಿದ್ದಾರೆ.
ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಎನ್‌ಕೌಂಟರ್: ಅತ್ಯಾಚಾರ ಸಹಿತ 17 ಕ್ರಿಮಿನಲ್ ಪ್ರಕರಣಗಳ ಆರೋಪಿ ಪೊಲೀಸರ ಗುಂಡೇಟಿಗೆ ಬಲಿ
ವಿಶೇಷ ಎಂದರೆ ಕಳೆದ ಒಂದು ತಿಂಗಳಿಂದ ನಿರಂತರವಾಗಿ ಸಫಾರಿಗೆ ತೆರಳುತ್ತಿರುವ ಪ್ರವಾಸಿಗರಿಗೆ ಈ ಬ್ಲಾಕ್ ಪ್ಯಾಂಥರ್ ಹಾಗೂ ಚಿರತೆ ದರ್ಶನ ನೀಡುತ್ತಲೇ ಇವೆ. ಕಾಡಿನ ಹಾದಿಯಲ್ಲಿ ಇವೆರಡೂ ಜೋಡಿಯಾಗಿ ಯಾವುದೇ ಭಯವಿಲ್ಲದೇ ಓಡಾಡುತ್ತಿರುವುದು ವನ್ಯಜೀವಿ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.
ಮಲೆನಾಡಿನ ಮಡಿಲಲ್ಲಿ ಅಡಗಿದ್ದ ಈ ಅಪರೂಪದ ಕಪ್ಪು ಸುಂದರಿ ಈಗ ಪದೇ ಪದೇ ಕಾಣಿಸಿಕೊಳ್ಳುತ್ತಿರುವುದರಿಂದ ಭದ್ರಾ ಸಫಾರಿಗೆ ಬರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ. ವಿಶೇಷ ಏನೆಂದರೆ ಬ್ಲಾಕ್ ಪ್ಯಾಂಥರ್ ಹಾಗೂ ಚಿರತೆ ಎಲ್ಲೇ ಹೋದರೂ ಒಟ್ಟಿಗೆ ಸಂಚಾರ ಮಾಡುತ್ತಿದ್ದು, ಉತ್ತಮ ಸ್ನೇಹಿತರಂತೆ ಕಾಣಿಸುತ್ತಿದೆ. ಏಕೆಂದರೆ ಈಗಾಗಲೇ ಹಲವು ಬಾರಿ ಎರಡು ಚಿರತೆಗಳು ಒಟ್ಟಿಗೆ ಕಾಣಿಸಿಕೊಂಡಿರುವುದೇ ವಿಶೇಷ.


