ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕಾಟೋಲ್ ತಹಶೀಲಿನ ರೌಲ್‌ಗಾಂವ್ ಗ್ರಾಮದಲ್ಲಿ ಇರುವ ಸ್ಫೋಟಕ ತಯಾರಿಕಾ ಘಟಕದಲ್ಲಿ ಭಾನುವಾರ ಬೆಳಗ್ಗೆ ಭೀಕರ ಸ್ಫೋಟ ಸಂಭವಿಸಿ ಕನಿಷ್ಠ 15 ಮಂದಿ ಮೃತಪಟ್ಟಿದ್ದಾರೆ.
ಗಣಿಗಾರಿಕೆ ಹಾಗೂ ಕೈಗಾರಿಕಾ ಬಳಕೆಗೆ ಸ್ಫೋಟಕಗಳನ್ನು ತಯಾರಿಸುವ SBL Energy Limited ಸಂಸ್ಥೆಯ ಘಟಕದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೆಳಗ್ಗೆ 7ರಿಂದ 7.15ರ ನಡುವೆ ಡಿಟೋನೇಟರ್ ಪ್ಯಾಕಿಂಗ್ ವಿಭಾಗದಲ್ಲಿ ಸ್ಫೋಟ ಸಂಭವಿಸಿದುದಾಗಿ ಕಂಪನಿ ಮೂಲಗಳು ಮಾಹಿತಿ ನೀಡಿವೆ. ಸ್ಫೋಟದ ತೀವ್ರತೆಯಿಂದ ಘಟಕದ ಒಂದು ಭಾಗಕ್ಕೆ ಭಾರೀ ಹಾನಿಯಾಗಿದೆ.
ಇದನ್ನೂ ಓದಿ:
ಗಾಯಗೊಂಡವರನ್ನು ತಕ್ಷಣವೇ ನಾಗ್ಪುರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಗಾಯಾಳುಗಳ ನಿಖರ ಸಂಖ್ಯೆ ಇನ್ನೂ ಸ್ಪಷ್ಟವಾಗಿಲ್ಲ. ಸ್ಥಳಕ್ಕೆ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ರಕ್ಷಣಾ ಕಾರ್ಯಾಚರಣೆ ಮುಂದುವರಿಸಿದ್ದಾರೆ.
ಘಟನೆಯ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಲಾಗುತ್ತಿದ್ದು, ಶೀಘ್ರದಲ್ಲೇ ಅಧಿಕೃತ ಹೇಳಿಕೆ ನೀಡಲಾಗುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ. ಸ್ಫೋಟದ ಕಾರಣ ಕುರಿತು ತನಿಖೆ ಆರಂಭಿಸಲಾಗಿದೆ.



