ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಲ್ನಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಜಯಗಳಿಸಿದ್ದಾರೆ.
ಶ್ರೀಕಾಂತ್ ಎದುರು ಬಿಜೆಪಿ ಮತ್ತು ಇತರ ಪಕ್ಷಗಳು ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದರೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಆ ವಾರ್ಡ್‌ನಲ್ಲಿ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ.
ಪಂಗಾರ್ಕರ್ 2001 ಮತ್ತು 2006 ರ ನಡುವೆ ಅವಿಭಜಿತ ಶಿವಸೇನೆಯಿಂದ ಜಲ್ನಾ ಪುರಸಭೆಯ ಸದಸ್ಯರಾಗಿದ್ದರು. 2011 ರಲ್ಲಿ ಶಿವಸೇನೆ ಅವರಿಗೆ ಟಿಕೆಟ್ ನಿರಾಕರಿಸಿದ ನಂತರ ಅವರು ಬಲಪಂಥೀಯ ಹಿಂದೂ ಜನಜಾಗೃತಿ ಸಮಿತಿಯನ್ನು ಸೇರಿದ್ದರು.
ರಾಜ್ಯದ ವಿವಿಧ ಭಾಗಗಳಿಂದ ಕಚ್ಚಾ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಆಗಸ್ಟ್ 2018 ರಲ್ಲಿ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಬಂಧಿಸಿತು.ಆ ಸಮಯದಲ್ಲಿ ಪಂಗಾರ್ಕರ್ ವಿರುದ್ಧ ಸ್ಫೋಟಕ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ ಮತ್ತು ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ಸೆಪ್ಟೆಂಬರ್ 4, 2024 ರಂದು ಅವರಿಗೆ ಜಾಮೀನು ನೀಡಿತ್ತು. ನವೆಂಬರ್ 2024 ರ ವಿಧಾನಸಭಾ ಚುನಾವಣೆಗೆ ಮುನ್ನ, ಪಂಗಾರ್ಕರ್ ಶಿವಸೇನೆಗೆ ಸೇರ್ಪಡೆಗೊಂಡಿದ್ದರು. ಸಾರ್ವಜನಿಕ ವಲಯದಿಂದ ಭಾರೀ ಆಕ್ರೋಶ ವ್ಯಕ್ತವಾದ ನಂತರ ಶಿಂಧೆ ಅವರು ಪಂಗಾರ್ಕರ್ ಅವರ ಸೇರ್ಪಡೆ ಪ್ರಕ್ರಿಯೆಯನ್ನು ಅಮಾನತಿನಲ್ಲಿಟ್ಟಿದ್ದರು.


