January16, 2026
Friday, January 16, 2026
spot_img

ಬಿಎಂಸಿ ಚುನಾವಣೆ ಫಲಿತಾಂಶ ಇಂದು ಪ್ರಕಟ: 150 ಸ್ಥಾನಗಳಲ್ಲಿ ಮಹಾಯುತಿ ಗೆಲುವು?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೃಹನ್ಮುಂಬೈ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ. ಮುಂಬೈ ಸೇರಿದಂತೆ ರಾಜ್ಯದ 29 ಪುರಸಭೆಗಳಿಗೆ ಜನವರಿ 15ರಂದು ಮತದಾನ ನಡೆದಿತ್ತು. ಮುಂಬೈನಲ್ಲಿ ಶೇ. 55 ರಷ್ಟು ಮತದಾನ ದಾಖಲಾಗಿದೆ. ಈ ಚುನಾವಣೆಯ ಮತ ಎಣಿಕೆ ಇಂದು ಬೆಳಿಗ್ಗೆ 10 ಗಂಟೆಯಿಂದ ವಿವಿಧ ಸ್ಥಳಗಳಲ್ಲಿ 23 ಎಣಿಕೆ ಕೊಠಡಿಗಳಲ್ಲಿ ನಡೆಯಲಿದೆ.

ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಬಿಎಂಸಿ ಚುನಾವಣೆಯಲ್ಲಿ ಬಿಜೆಪಿ – ಶಿವಸೇನಾ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಸಮೀಕ್ಷೆಗಳು ಪ್ರಕಟವಾದ ನಂತರ ಮಾತನಾಡಿದ ಶಿವಸೇನಾ ನಾಯಕ ರಾಜು ವಾಘ್ಮಾರೆ, ಮಹಾಯುತಿ 150 ಸ್ಥಾನಗಳನ್ನು ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬೈ ಮಹಾನಗರ ಪಾಲಿಕೆಯಲ್ಲಿ ಮಹಾಯುತಿ ಅಧಿಕಾರ ಹಿಡಿಯಲಿದೆ ಎಂಬುದು ನಮ್ಮ ನಿರೀಕ್ಷೆಯಾಗಿದೆ. 150 ಕ್ಕೂ ಹೆಚ್ಚು ನಮ್ಮದೇ ಕಾರ್ಪೋರೇಟರ್​ ಗಳು ಆಯ್ಕೆಯಾಗುತ್ತಾರೆ ಎಂದು ನಾವು ಈಗಾಗಲೇ ಹೇಳಿದ್ದೆವು. ಚುನಾವಣೋತ್ತರ ಸಮೀಕ್ಷೆಗಳನ್ನು ನೋಡಿದರೆ ಮತ್ತು ಮೆಗಾ ಸಮೀಕ್ಷೆಗಳನ್ನು ಲೆಕ್ಕ ಹಾಕಿದರೂ ಮಹಾಯುತಿ ಯಾವುದೇ ಸಂದರ್ಭದಲ್ಲಿ 150 ಸ್ಥಾನಗಳಲ್ಲಿ ಗೆದ್ದು ಪಾಲಿಕೆ ಅಧಿಕಾರದ ಗದ್ದುಗೆ ಹಿಡಿಯಲಿದೆ. ಮತ್ತು ಮೇಯರ್ ಮರಾಠಿ ಹಾಗೂ ಹಿಂದೂ ಮಾತ್ರ ಆಗಿರುತ್ತಾರೆ ಎಂದು ವಾಘ್ಮಾರೆ ಹೇಳಿದ್ದಾರೆ.

ಗುರುವಾರ ನಡೆದ ಬಿಎಂಸಿ ಚುನಾವಣೆಗೆ ನಡೆದ ಮತದಾನದ ಬಳಿಕ ಬಿಡುಗಡೆಯಾದ ಸಮೀಕ್ಷೆಗಳು ಬಿಜೆಪಿ – ಶಿವಸೇನೆ ಮೈತ್ರಿಕೂಟ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿವೆ. ಈ ಸಮೀಕ್ಷೆಗಳ ಪ್ರಕಾರ ಠಾಕ್ರೆ ಸಹೋದರರು ಎರಡನೇ ಸ್ಥಾನದಲ್ಲಿದ್ದರೆ, ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳು ಬಲವಾದ ಪ್ರದರ್ಶನ ನೀಡುವಲ್ಲಿ ವಿಫಲವಾಗಿವೆ ಎಂದು ತೋರಿಸಿವೆ. ಅಂತಿಮ ಫಲಿತಾಂಶ ಮತ ಎಣಿಕೆಯ ಬಳಿಕವಷ್ಟೇ ಗೊತ್ತಾಗಲಿದೆ.

ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯ ಪ್ರಕಾರ, ಬಿಜೆಪಿ-ಶಿವಸೇನೆ ಮೈತ್ರಿಕೂಟ 131-151 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಶಿವಸೇನೆ (ಯುಬಿಟಿ)-ಎಂಎನ್‌ಎಸ್-ಎನ್‌ಸಿಪಿ (ಎಸ್‌ಪಿ) ಮೈತ್ರಿಕೂಟ 58 -68 ಸ್ಥಾನಗಳಲ್ಲಿ ಜಯಗಳಿಸಬಹುದು. ಇನ್ನು ಕಾಂಗ್ರೆಸ್-ವಿಬಿಎ-ಆರ್‌ಎಸ್‌ಪಿ ಮೈತ್ರಿಕೂಟ 12-16 ಸ್ಥಾನಗಳಿಗೆ ಸೀಮಿತವಾಗಲಿದೆ. ಇತರರು 6-12 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಬಿಎಂಸಿಯ 227 ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆದಿದ್ದು, ಸರಳ ಬಹುಮತಕ್ಕೆ ಒಂದು ಪಕ್ಷ ಅಥವಾ ಮೈತ್ರಿಕೂಟಕ್ಕೆ 114 ಸ್ಥಾನಗಳು ಬೇಕಾಗುತ್ತವೆ.

Must Read

error: Content is protected !!