ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮ್ಮ ಮೆಟ್ರೋ ಯೆಲ್ಲೋ ಲೈನ್ ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಸಿಹಿ ಸುದ್ದಿ ನೀಡಲು ಸಿದ್ಧತೆ ನಡೆಸಿದೆ. ಡಿಸೆಂಬರ್ 22 ರಿಂದ ಹಳದಿ ಮಾರ್ಗದಲ್ಲಿ ಆರನೇ ಮೆಟ್ರೋ ರೈಲು ಸೇವೆಗೆ ಲಭ್ಯವಾಗುವ ಸಾಧ್ಯತೆ ದಟ್ಟವಾಗಿದೆ.
ಈ ಹೊಸ ರೈಲು ಸೇರ್ಪಡೆಯಿಂದಾಗಿ ಪ್ರಸ್ತುತ ಪೀಕ್-ಅವರ್‌ನಲ್ಲಿ 15 ನಿಮಿಷಕ್ಕೊಮ್ಮೆ ಸಂಚರಿಸುತ್ತಿದ್ದ ರೈಲುಗಳ ಓಡಾಟವು ಪ್ರತಿ 12 ನಿಮಿಷಕ್ಕೊಮ್ಮೆ ಸಂಚರಿಸಲು ಅನುಕೂಲವಾಗಲಿದ್ದು, ಪ್ರಯಾಣಿಕರ ಕಾಯುವಿಕೆ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ.
ನವೆಂಬರ್ ಕೊನೆಯ ವಾರದಲ್ಲಿ ಆರು ಬೋಗಿಗಳ ಆರನೇ ರೈಲನ್ನು ಬಿಎಂಆರ್‌ಸಿಎಲ್ ಸ್ವೀಕರಿಸಿತ್ತು. ಈ ಬೋಗಿಗಳನ್ನು ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್ ಪುಜೆನ್ ಕೋ ಲಿಮಿಟೆಡ್‌ನೊಂದಿಗಿನ ಒಪ್ಪಂದದ ಭಾಗವಾಗಿ ಕೋಲ್ಕತ್ತಾ ಬಳಿಯ ಟಿಟಾಘರ್ ರೈಲ್ ಸಿಸ್ಟಮ್ಸ್ ಲಿಮಿಟೆಡ್ ತಯಾರಿಸಿದೆ. ಟಿಆರ್‌ಎಸ್‌ಎಲ್ ಈ ಒಪ್ಪಂದದ ಅಡಿಯಲ್ಲಿ ಒಟ್ಟು 36 ರೈಲುಗಳನ್ನು 1,578 ಕೋಟಿ ವೆಚ್ಚದಲ್ಲಿ ಪೂರೈಸುತ್ತಿದೆ.
ಆರನೇ ರೈಲು ಪ್ರಯಾಣಿಕರ ಸೇವೆಗೆ ಲಭ್ಯವಾಗುವ ಮೊದಲು ಸಿಗ್ನಲಿಂಗ್ ಇಂಟರ್ಫೇಸ್ ಪರೀಕ್ಷೆಗಳು ಸೇರಿದಂತೆ ಕಡ್ಡಾಯವಾಗಿ 750 ಕಿ.ಮೀ. ಸಂಚಾರವನ್ನು ಪೂರ್ಣಗೊಳಿಸಬೇಕಿದೆ. ಕ್ರಿಸ್ಮಸ್‌ಗೆ ಮುನ್ನ, ಡಿಸೆಂಬರ್ 22 ರಂದು ಈ ರೈಲು ಸಂಚಾರವನ್ನು ಆರಂಭಿಸಲು ಬಿಎಂಆರ್‌ಸಿಎಲ್ ಅಧಿಕಾರಿಗಳು ತೀವ್ರ ಪ್ರಯತ್ನಗಳನ್ನು ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆದಾಗ್ಯೂ, ಇತರ ಮೆಟ್ರೋ ಮಾರ್ಗಗಳಲ್ಲಿ ಬೆಳಗ್ಗೆ 5 ಗಂಟೆಗೆ ರೈಲು ಸಂಚಾರ ಆರಂಭವಾಗುತ್ತಿದ್ದರೂ, ಯೆಲ್ಲೋ ಲೈನ್‌ನಲ್ಲಿ ಪ್ರಸ್ತುತ ಇರುವ ಆರಂಭಿಕ ಸಮಯ (ಬೆಳಗ್ಗೆ 6 ಗಂಟೆ) ಯಥಾಪ್ರಕಾರ ಮುಂದುವರಿಯುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
19.15 ಕಿ.ಮೀ. ಉದ್ದದ ಈ ಯೆಲ್ಲೋ ಲೈನ್‌ನಲ್ಲಿ ರೈಲು ಸಂಚಾರವು ಆಗಸ್ಟ್ 11 ರಿಂದ ಪ್ರಾರಂಭವಾಗಿದೆ ಮತ್ತು ಇದು ನಮ್ಮ ಮೆಟ್ರೋದ ದೈನಂದಿನ ಪ್ರಯಾಣಿಕರ ಸಂಖ್ಯೆಯನ್ನು 10 ಲಕ್ಷ ಗಡಿ ದಾಟುವಂತೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ, ಕಡಿಮೆ ಸಂಖ್ಯೆಯ ರೈಲುಗಳ ಸಂಚಾರ ಮತ್ತು ಬೆಳಗ್ಗೆ ತಡವಾಗಿ ಸೇವೆಯನ್ನು ಪ್ರಾರಂಭಿಸುವ ಬಗ್ಗೆ ಪ್ರಯಾಣಿಕರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದ್ದು, ಆರನೇ ರೈಲು ಸೇರ್ಪಡೆ ಈ ಸಮಸ್ಯೆಗೆ ಪರಿಹಾರ ನೀಡುವ ನಿರೀಕ್ಷೆ ಇದೆ.

