Friday, October 31, 2025

ಕನ್ನಡ ರಾಜ್ಯೋತ್ಸವಕ್ಕೆ ಗಿಫ್ಟ್‌ ಕೊಟ್ಟ BMRCL: ಯೆಲ್ಲೋ ಲೈನ್‌ನಲ್ಲಿ ನಾಳೆಯಿಂದ ಟ್ರ್ಯಾಕಿಗಿಳಿಯಲಿದೆ ಐದನೇ ರೈಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೆಟ್ರೋ ಪ್ರಯಾಣಿಕರ ನಿರೀಕ್ಷೆ ಇದೀಗ ಕೊನೆಗೊಳ್ಳಲಿದೆ. ಬಿಎಂಆರ್‌ಸಿಎಲ್ (BMRCL) ಸಂಸ್ಥೆಯು ಯೆಲ್ಲೋ ಮೆಟ್ರೋ ಮಾರ್ಗದ ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ್ದು, ನಾಳೆಯಿಂದ (ನವೆಂಬರ್ 1) ಐದನೇ ಸೆಟ್‌ ರೈಲು ಟ್ರ್ಯಾಕ್‌ಗೆ ಇಳಿಯಲಿದೆ. ಇದರೊಂದಿಗೆ ಯೆಲ್ಲೋ ಲೈನ್‌ನಲ್ಲಿ ರೈಲುಗಳು ಈಗ 15 ನಿಮಿಷಕ್ಕೊಮ್ಮೆ ಸಂಚರಿಸಲಿವೆ.

ಶನಿವಾರದಿಂದ ಹೊಸ ರೈಲು ಸಂಚಾರ ಪ್ರಾರಂಭವಾಗಲಿದ್ದು, ಇದರಿಂದ ಪ್ರಯಾಣಿಕರ ಕಾಯುವಿಕೆ ಸಮಯವು 20 ನಿಮಿಷದಿಂದ 15 ನಿಮಿಷಕ್ಕೆ ಇಳಿಯಲಿದೆ. ಪೀಕ್ ಅವರ್ ಸಮಯದಲ್ಲಿ ಹೆಚ್ಚು ಜನ ಪ್ರಯಾಣಿಸುವುದರಿಂದ, ಈ ಕ್ರಮವು ಪ್ರಯಾಣಿಕರಿಗೆ ಮಹತ್ತರ ಅನುಕೂಲ ತರುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಈ ಹೊಸ ರೈಲು ಸೇರಿಕೆಯಿಂದ ಮೆಟ್ರೋ ಸೇವೆಯ ದಟ್ಟಣೆ ತಗ್ಗಲಿದೆ. ಈಗಾಗಲೇ ಐದನೇ ರೈಲಿನ ಎಲ್ಲಾ ತಾಂತ್ರಿಕ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಕೊನೆಯ ಹಂತದ ಪರಿಶೀಲನೆ ಕಾರ್ಯವೂ ಮುಗಿಯುವ ಹಂತದಲ್ಲಿದೆ. ನಾಳೆಯಿಂದ ಈ ರೈಲು ಅಧಿಕೃತವಾಗಿ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ.

ಯೆಲ್ಲೋ ಲೈನ್‌ ವಿಸ್ತರಣೆ ಹಂತದಲ್ಲಿ ಕ್ರಮೇಣ ಹೆಚ್ಚುತ್ತಿರುವ ಪ್ರಯಾಣಿಕರ ಸಂಖ್ಯೆಯನ್ನು ಗಮನದಲ್ಲಿಟ್ಟುಕೊಂಡು ಬಿಎಂಆರ್‌ಸಿಎಲ್ ಈ ನಿರ್ಧಾರ ಕೈಗೊಂಡಿದೆ. ಹೊಸ ರೈಲು ಸೇರ್ಪಡೆಯಿಂದ ಮೆಟ್ರೋ ಸೇವೆ ಇನ್ನಷ್ಟು ವೇಗವಾಗಿ ಮತ್ತು ಸುಗಮವಾಗಿ ಕಾರ್ಯನಿರ್ವಹಿಸಲಿದೆ.

error: Content is protected !!