ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಥಿಯೋಪಿಯನ್ ವಲಸಿಗರಿದ್ದ ಬೋಟ್ ಮುಳುಗಡೆಯಾದ ಪರಿಣಾಮ 76 ಮಂದಿ ಸಾವನ್ನಪ್ಪಿದ್ದು, ಅನೇಕರು ನಾಪತ್ತೆಯಾಗಿರುವ ಘಟನೆ ಯೆಮೆನ್ ಕರಾವಳಿಯಲ್ಲಿ ನಡೆದಿದೆ.
ಯೆಮೆನ್‌ನ ದಕ್ಷಿಣ ಅಬ್ಯಾನ್ ಪ್ರಾಂತ್ಯದ ಕರಾವಳಿಯಲ್ಲಿ ದೋಣಿ ಮುಳುಗಡೆಯಾಗಿದ್ದು, 32 ಮಂದಿಯನ್ನು ರಕ್ಷಿಸಲಾಗಿದೆ. ಘಟನೆಯಲ್ಲಿ 76 ಮಂದಿ ವಲಸಿಗರ ಮೃತದೇಹ ಪತ್ತೆಯಾಗಿದೆ ಎಂದು ಯೆಮೆನ್ ಭದ್ರತಾ ಅಧಿಕಾರಿಗಳು ತಿಳಿಸಿದ್ದಾರೆ.
ಕಡುಬಡತನದಿಂದ ಆಫ್ರಿಕಾದಿಂದ ನೂರಾರು ವಲಸಿಗರು ಗಲ್ಫ್ ಅರಬ್ ರಾಷ್ಟ್ರಕ್ಕೆ ತೆರಳುತ್ತಿದ್ದರು. ಯೆಮೆನ್‌ಗೆ ಅನಧಿಕೃತ ವಲಸಿಗರ ಹರಿವು ಹೆಚ್ಚಾಗುತ್ತಿದೆ ಎಂದು ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ವಲಸೆ ಸಂಘಟನೆ ತಿಳಿಸಿದೆ.