ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಬಂದ ಬೆನ್ನಲ್ಲೇ, ಈಗ ಕರ್ನಾಟಕದ ಲೋಕಭವನವನ್ನು ಸ್ಫೋಟಿಸುವುದಾಗಿ ಕಿಡಿಗೇಡಿಗಳು ಇ-ಮೇಲ್ ಮೂಲಕ ಬೆದರಿಕೆ ಹಾಕಿದ್ದಾರೆ. ಜನವರಿ 14ರಂದು ರಾಜ್ಯಪಾಲರ ಅಧಿಕೃತ ಇ-ಮೇಲ್ ಐಡಿಗೆ ಸಂದೇಶ ಕಳುಹಿಸಿದ್ದ ದುಷ್ಕರ್ಮಿಗಳು, ಮಧ್ಯಾಹ್ನದೊಳಗೆ ಕಟ್ಟಡವನ್ನು ಸ್ಫೋಟಿಸುವುದಾಗಿ ಎಚ್ಚರಿಸಿದ್ದರು. ಆದರೆ, ತಪಾಸಣೆಯ ನಂತರ ಇದು ಹುಸಿ ಬೆದರಿಕೆ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.
[email protected] ಎಂಬ ಐಡಿಯಿಂದ ಬಂದ ಈ ಮೇಲ್‌ನಲ್ಲಿ ತಮಿಳುನಾಡಿನ ಪೊಲೀಸ್ ವ್ಯವಸ್ಥೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ತಮಿಳುನಾಡಿನಲ್ಲಿ 1979ರ ‘ನೈನಾರ್ ದಾಸ್ ಪೊಲೀಸ್ ಒಕ್ಕೂಟ’ದ ಶಿಫಾರಸುಗಳನ್ನು ಜಾರಿಗೆ ತರಬೇಕು. ತಮಿಳುನಾಡಿನ ಕಾನ್‌ಸ್ಟೆಬಲ್‌ಗಳನ್ನು ಗಣ್ಯರ ಮನೆಯ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ಕಿಡಿಗೇಡಿಗಳು, ಈ ಪದ್ಧತಿಯ ವಿರುದ್ಧ ಪ್ರತಿಭಟಿಸಲು ಈ ಮಾರ್ಗ ಹಿಡಿದಿರುವುದಾಗಿ ತಿಳಿಸಿದ್ದಾರೆ.
ಈ ಕೃತ್ಯದಲ್ಲಿ ಮಾಜಿ LTTE ಸದಸ್ಯರು ಮತ್ತು ಕಾಶ್ಮೀರದ ISI ಸದಸ್ಯರು ಭಾಗಿಯಾಗಲಿದ್ದಾರೆ ಹಾಗೂ ಶ್ರೀಲಂಕಾದ ಈಸ್ಟರ್ ದಾಳಿಯ ಮಾದರಿಯಲ್ಲಿ ಆತ್ಮಹತ್ಯಾ ದಾಳಿ ನಡೆಸುವುದಾಗಿ ಬೆದರಿಕೆಯಲ್ಲಿ ಉಲ್ಲೇಖಿಸಲಾಗಿತ್ತು.
ಬೆದರಿಕೆ ಸಂದೇಶ ಸಿಗುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು, ಶ್ವಾನ ದಳ ಮತ್ತು ಬಾಂಬ್ ನಿಷ್ಕ್ರಿಯ ದಳದೊಂದಿಗೆ ಲೋಕಭವನದಲ್ಲಿ ವ್ಯಾಪಕ ತಪಾಸಣೆ ನಡೆಸಿದರು. ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಅಧಿಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಈ ಸಂಬಂಧ ಜನವರಿ 20ರಂದು ಲೋಕಭವನದ ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇ-ಮೇಲ್ ಕಳುಹಿಸಿದ ಕಿಡಿಗೇಡಿಗಳ ಪತ್ತೆಗೆ ಸೈಬರ್ ಕ್ರೈಂ ಪೊಲೀಸರು ಬಲೆ ಬೀಸಿದ್ದಾರೆ.


