ಹೊಸದಿಗಂತ ಗದಗ:
ಗದಗ ನಗರದ ಜಿಲ್ಲಾಧಿಕಾರಿ ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿ ಇ-ಮೇಲ್ ಸಂದೇಶವೊಂದು ಬಂದ ಪರಿಣಾಮ, ಸೋಮವಾರ ಬೆಳಿಗ್ಗೆ ಡಿಸಿ ಕಚೇರಿ ಆವರಣದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ತೀವ್ರ ಶೋಧದ ನಂತರ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಕಾರಣ, ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಅನುಮಾನ ವ್ಯಕ್ತವಾಗಿದೆ.
‘ಅರ್ನಾ ಅಶ್ವಿನ್ ಶೇಖರ್’ ಎಂಬ ಹೆಸರಿನಿಂದ ಸೋಮವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಅಧಿಕಾರಿಗಳ ಇ-ಮೇಲ್‌ಗೆ ಈ ಬೆದರಿಕೆ ಸಂದೇಶ ಬಂದಿತ್ತು. ಜಿಲ್ಲಾಧಿಕಾರಿ ಕಚೇರಿಯ ಐದು ಪ್ರಮುಖ ಸ್ಥಳಗಳಲ್ಲಿ ಬಾಂಬ್‌ಗಳನ್ನು ಇಡಲಾಗಿದೆ ಎಂದು ಆ ಸಂದೇಶದಲ್ಲಿ ತಿಳಿಸಲಾಗಿತ್ತು. ಈ ಮೆಸೇಜ್‌ನಿಂದಾಗಿ ಜಿಲ್ಲಾಡಳಿತ ಭವನದ ಅಧಿಕಾರಿಗಳು ಮತ್ತು ಸಿಬ್ಬಂದಿ ಕಂಗಾಲಾಗಿದ್ದರು.
ವಿಷಯ ತಿಳಿದ ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ತಕ್ಷಣವೇ ಶ್ವಾನ ದಳ ಮತ್ತು ಬಾಂಬ್ ಸ್ಕ್ವಾಡ್‌ನೊಂದಿಗೆ ಸ್ಥಳಕ್ಕೆ ಧಾವಿಸಿದರು. ಜಿಲ್ಲಾಡಳಿತ ಭವನದ ಇಂಚಿಂಚೂ ಶೋಧ ಕಾರ್ಯಾಚರಣೆ ನಡೆಸಲಾಯಿತು. ಜಿಲ್ಲಾಧಿಕಾರಿಗಳ ಕೊಠಡಿ ಸೇರಿದಂತೆ ಕಚೇರಿಯ ಪ್ರಮುಖ ಸ್ಥಳಗಳನ್ನು ಪರಿಶೀಲಿಸಲಾಯಿತು. ಸುಮಾರು ಎರಡು ಗಂಟೆಗಳ ಕಾಲ ನಡೆದ ಈ ಶೋಧ ಕಾರ್ಯದಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಲಿಲ್ಲ.
ಇತ್ತೀಚಿನ ದಿನಗಳಲ್ಲಿ ದೇಶದ ಹಲವೆಡೆ ಹೆಚ್ಚುತ್ತಿರುವ ಬಾಂಬ್ ಬೆದರಿಕೆಗಳ ಸರಣಿಯ ಭಾಗವಾಗಿ ಇದೂ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಆ ಇ-ಮೇಲ್‌ನಲ್ಲಿ, ತಮಿಳುನಾಡು ಚುನಾವಣೆ ಸಮಯದಲ್ಲಿ ಗಮನ ಬೇರೆಡೆ ಸೆಳೆಯುವ ಯತ್ನ ಇದಾಗಿದ್ದು, ತಮಿಳುನಾಡಿನ ಎಲ್‌ಟಿಟಿಇ ಕಾರ್ಯಕರ್ತರೊಂದಿಗೆ ಪಾಕಿಸ್ತಾನದ ಐಎಸ್‌ಐ ಸಂಸ್ಥೆ ಸೇರಿ ಸ್ಫೋಟಕ್ಕೆ ಸಂಚು ರೂಪಿಸಿದೆ ಎಂದು ಬರೆಯಲಾಗಿತ್ತು.
ಡಿವೈಎಸ್‌ಪಿ ಮುರ್ತುಜಾ ಖಾಜಿ, ಸಿಪಿಐಗಳಾದ ಲಾಲ್‌ಸಾಬ್ ಜೂಲಕಟ್ಟಿ, ಸಿದ್ದರಾಮೇಶ ಹಾಗೂ ಪಿಎಸ್‌ಐ ವಿ.ಜಿ. ಪವಾರ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಈ ಪರಿಶೀಲನಾ ಕಾರ್ಯಾಚರಣೆ ನಡೆಯಿತು. ಅಂತಿಮವಾಗಿ ಯಾವುದೇ ಅಪಾಯವಿಲ್ಲ ಎಂದು ಖಚಿತವಾದ ನಂತರ ಜಿಲ್ಲಾಡಳಿತ ಭವನದಲ್ಲಿ ನೆಮ್ಮದಿಯ ನಿಟ್ಟುಸಿರು ಬಿಡುವ ವಾತಾವರಣ ನಿರ್ಮಾಣವಾಯಿತು.

