February 16, 2026
Monday, February 16, 2026
spot_img

ಕಾರವಾರ ನ್ಯಾಯಾಲಯಕ್ಕೆ ಬಾಂಬ್ ಬೆದರಿಕೆ ಇ-ಮೇಲ್: ಕಲಾಪ ಸ್ಥಗಿತ, ಬಿಗಿ ಪೊಲೀಸ್ ಬಂದೋಬಸ್ತ್

ಹೊಸದಿಗಂತ ಕಾರವಾರ:

ಉತ್ತರ ಕನ್ನಡ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸೋಮವಾರ ಬೆಳಿಗ್ಗೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯದ ಕಲಾಪಗಳನ್ನು ಮುಂದೂಡಿ ಇಡೀ ಆವರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೋಮವಾರ ಬೆಳಿಗ್ಗೆ 8.25ರ ಸುಮಾರಿಗೆ ನ್ಯಾಯಾಲಯದ ಕಂಪ್ಯೂಟರ್ ವಿಭಾಗಕ್ಕೆ ‘ಸುನ್ನಿಯಾ ದಾಸನ್’ ([email protected]) ಎಂಬ ಮೇಲ್ ಐಡಿಯಿಂದ ಸಂದೇಶ ಬಂದಿದೆ. ನ್ಯಾಯಾಧೀಶರ ಚೇಂಬರ್‌ನಲ್ಲಿ ಎರಡು R-DX ಬಾಂಬ್‌ಗಳನ್ನು ಇರಿಸಲಾಗಿದ್ದು, ಮಧ್ಯಾಹ್ನ 12.15ರ ಒಳಗಾಗಿ ನ್ಯಾಯಾಲಯವನ್ನು ಖಾಲಿ ಮಾಡುವಂತೆ ಇ-ಮೇಲ್‌ನಲ್ಲಿ ಎಚ್ಚರಿಸಲಾಗಿತ್ತು.

ಇದರಿಂದ ಆತಂಕಕ್ಕೊಳಗಾದ ನ್ಯಾಯಾಲಯದ ಸಿಬ್ಬಂದಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ದೌಡಾಯಿಸಿದ ಭದ್ರತಾ ಪಡೆಗಳು ಶೋಧ ಕಾರ್ಯ ನಡೆಸಿದವು. ಅಹಿತಕರ ಘಟನೆ ನಡೆಯದಂತೆ ಕಲಾಪಗಳನ್ನು ಸ್ಥಗಿತಗೊಳಿಸಿ ಜನರನ್ನು ಆವರಣದಿಂದ ಹೊರಗೆ ಕಳುಹಿಸಲಾಯಿತು.

ಈ ಮೇಲ್‌ನಲ್ಲಿ ತಮಿಳುನಾಡು ಸರ್ಕಾರ, ಪ್ರಶಾಂತ್ ಕಿಶೋರ್ ಮತ್ತು ಸುನೀಲ್ ಕನುಗೋಲು ಅವರ ಹೆಸರನ್ನು ಉಲ್ಲೇಖಿಸಲಾಗಿದ್ದು, ಮಾಧ್ಯಮಗಳ ದುರುಪಯೋಗ ಹಾಗೂ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದಂತಹ ಗಂಭೀರ ಆರೋಪಗಳನ್ನು ಮಾಡಲಾಗಿದೆ.

ಕುತೂಹಲಕಾರಿ ಸಂಗತಿಯೆಂದರೆ, ಕೆಲವು ತಿಂಗಳ ಹಿಂದೆ ಕಾರವಾರ ಮತ್ತು ಭಟ್ಕಳ ತಹಶೀಲ್ದಾರ್ ಕಚೇರಿಗಳಿಗೆ ‘ಗೈನಾ ರಮೇಶ್’ ಎಂಬ ಹೆಸರಿನಲ್ಲಿ ಬಂದಿದ್ದ ಬೆದರಿಕೆ ಪತ್ರದ ಸಾರಾಂಶವೇ ಇಲ್ಲೂ ಕಂಡುಬಂದಿದೆ.

ಇದು ಕೇವಲ ಹುಸಿ ಬೆದರಿಕೆ ಎಂದು ಮೇಲ್ನೋಟಕ್ಕೆ ಕಂಡುಬಂದರೂ, ತನಿಖಾ ಸಂಸ್ಥೆಗಳು ಇದನ್ನು ಗಂಭೀರವಾಗಿ ಪರಿಗಣಿಸಿವೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !