ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಬೆಳಿಗ್ಗೆ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ದೆಹಲಿ ವಿಶ್ವವಿದ್ಯಾಲಯದ ಎರಡು ಪ್ರಮುಖ ಕಾಲೇಜುಗಳಿಗೆ ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ತುರ್ತು ಕ್ರಮ ಕೈಗೊಳ್ಳಲಾಗಿದೆ. ರಾಮ್ಜಾಸ್ ಕಾಲೇಜು ಮತ್ತು ಮಿರಾಂಡಾ ಹೌಸ್ಗೆ ಸ್ಫೋಟದ ಎಚ್ಚರಿಕೆ ಮೇಲ್ ಬಂದ ತಕ್ಷಣ ವಿದ್ಯಾರ್ಥಿಗಳು, ಉಪನ್ಯಾಸಕರು ಮತ್ತು ಸಿಬ್ಬಂದಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ಬೆದರಿಕೆ ಸಂದೇಶ ಬಂದ ಕೂಡಲೇ ಕಾಲೇಜು ಆವರಣದಲ್ಲಿ ಗೊಂದಲದ ಪರಿಸ್ಥಿತಿ ಉಂಟಾಗಿದ್ದು, ಆಡಳಿತ ಮಂಡಳಿ ತಕ್ಷಣವೇ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ. ಅದರ ಬೆನ್ನಲ್ಲೇ ಬಾಂಬ್ ನಿಷ್ಕ್ರಿಯ ದಳ, ಡಾಗ್ ಸ್ಕ್ವಾಡ್ ಹಾಗೂ ಭದ್ರತಾ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ, ಎರಡೂ ಕ್ಯಾಂಪಸ್ಗಳಲ್ಲಿ ಸಮಗ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ.
ಇದನ್ನೂ ಓದಿ:
ಪ್ರಾಥಮಿಕ ಪರಿಶೀಲನೆಯಲ್ಲಿ ಈವರೆಗೆ ಯಾವುದೇ ಸ್ಫೋಟಕ ವಸ್ತು ಅಥವಾ ಅನುಮಾನಾಸ್ಪದ ಸಾಮಗ್ರಿ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೇಲ್ನೋಟಕ್ಕೆ ಇದು ಸುಳ್ಳು ಬೆದರಿಕೆ ಮೇಲ್ ಆಗಿರುವ ಸಾಧ್ಯತೆ ವ್ಯಕ್ತವಾಗಿದ್ದರೂ, ಪೊಲೀಸರು ಯಾವುದೇ ಸಾಧ್ಯತೆಯನ್ನು ನಿರ್ಲಕ್ಷಿಸದೆ ಸಂಪೂರ್ಣ ಪರಿಶೀಲನೆ ಮುಂದುವರಿಸಿದ್ದಾರೆ.
ಇದೀಗ ಬೆದರಿಕೆ ಮೇಲ್ ಕಳುಹಿಸಿದ ವ್ಯಕ್ತಿ ಅಥವಾ ಗುಂಪನ್ನು ಪತ್ತೆಹಚ್ಚಲು ಸೈಬರ್ ಸೆಲ್ ತನಿಖೆ ಆರಂಭಿಸಿದೆ. ಇಮೇಲ್ ಮೂಲ, ಐಪಿ ವಿಳಾಸ ಮತ್ತು ಅದರ ಹಿಂದಿನ ಉದ್ದೇಶದ ಬಗ್ಗೆ ಸಮಗ್ರ ತನಿಖೆ ನಡೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ದೇಶದ ಹಲವು ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕಚೇರಿಗಳಿಗೆ ಇಂತಹ ಬೆದರಿಕೆ ಸಂದೇಶಗಳು ಬರುತ್ತಿರುವ ಹಿನ್ನೆಲೆ, ಭದ್ರತಾ ಸಂಸ್ಥೆಗಳು ಹೆಚ್ಚುವರಿ ಎಚ್ಚರಿಕೆ ವಹಿಸಿವೆ.



