Wednesday, January 14, 2026
Wednesday, January 14, 2026
spot_img

ಏರ್ ಇಂಡಿಯಾ, ಇಂಡಿಗೋ ವಿಮಾನಕ್ಕೆ ಬಂತು ಬಾಂಬ್ ಬೆದರಿಕೆ: ದೆಹಲಿ ಸಹಿತ 5 ಏರ್‌ಪೋರ್ಟ್‌ನಲ್ಲಿ ಹೈ ಅಲರ್ಟ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಕಾರು ಸ್ಫೋಟ ಪ್ರಕರಣದ ಹಿಂದೆ ಉಗ್ರರ ಕೈವಾಡಗಳು ವ್ಯಕ್ತವಾಗುತ್ತಿದೆ. ಇದರ ಕುರಿತು ತನಿಖೆ ನಡೆಯುತ್ತಿದೆ. ಈ ಬೆಳವಣಿಗೆ ನಡುವೆ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆಗಳು ಬಂದಿವೆ. ಹಾರಾಟದ ವೇಳೆ ವಿಮಾನ ಸ್ಫೋಟಿಸುವ ಬೆದರಿಕೆ ಇಮೇಲ್‌ಗಳು ಬಂದಿದೆ. ಹೀಗಾಗಿ ದೆಹಲಿ-ಮುಂಬೈ ಸೇರಿದಂತೆ ಪ್ರಮುಖ 5 ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಇಂಡಿಗೋ ವಿಮಾನ ಸಂಸ್ಥೆಗೆ ಇಂದು (ನ.12) ಇಮೇಲ್ ಮೂಲಕ ಬೆದರಿಕೆ ಬಂದಿದೆ. ಸಂಜೆ 3.40 ಹಾಗೂ 3.45ರ ಸುಮಾರಿನಲ್ಲಿ ಇಮೇಲ್ ಬಂದಿದೆ. ಇಮೇಲ್ ಗಮನಕ್ಕೆ ಬಂದ ತಕ್ಷಣವೇ ಭದ್ರತಾ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ. ತಕ್ಷಣವೇ ದೆಹಲಿ , ಮುಂಬೈ ಸೇರಿದಂತೆ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಇತ್ತ ತನಿಖಾ ಎಜೆನ್ಸಿಳು ಇಮೇಲ್ ಮೂಲದ ತನಿಖೆ ಮಾಡುತ್ತಿದ್ದಾರೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ಗೂ ಬಾಂಬ್ ಬೆದರಿಕೆ
ಮುಂಬೈನಿಂದ ವಾರಾಣಸಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಪ್ರಯಾಣದ ಸಮಯದಲ್ಲಿ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ವಿಮಾನದಲ್ಲಿದ್ದ ಸಿಬ್ಬಂದಿ ಮತ್ತು ಪ್ರಯಾಣಿಕರಿಗೆ ಆತಂಕ ಉಂಟಾಯಿತು. ಈ ಘಟನೆಯ ನಂತರ, ವಾರಾಣಸಿಯ ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹೈ ಅಲರ್ಟ್ ಘೋಷಿಸಲಾಯಿತು. ಆ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿತು.

ಈ ಘಟನೆಗೆ ಪ್ರತಿಕ್ರಿಯಿಸಿದ ವಿಮಾನಯಾನ ಸಂಸ್ಥೆ, ಅಗತ್ಯವಿರುವ ಎಲ್ಲಾ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ ನಂತರ ಪ್ರಯಾಣಿಕರು ಸುರಕ್ಷಿತವಾಗಿ ವಿಮಾನದಿಂದ ಇಳಿದಿದ್ದಾರೆ ಎಂದು ಹೇಳಿದೆ.

ವಾರಾಣಸಿಗೆ ಹೋಗುವ ನಮ್ಮ ವಿಮಾನಗಳಲ್ಲಿ ಒಂದಕ್ಕೆ ಭದ್ರತಾ ಬೆದರಿಕೆ ಬಂದಿದೆ. ಶಿಷ್ಟಾಚಾರಕ್ಕೆ ಅನುಗುಣವಾಗಿ, ಸರ್ಕಾರ ನೇಮಿಸಿದ ಬಾಂಬ್ ಬೆದರಿಕೆ ಪರಿಶೀಲನಾ ಸಮಿತಿಗೆ ತಕ್ಷಣವೇ ಎಚ್ಚರಿಕೆ ನೀಡಲಾಯಿತು. ಅಗತ್ಯವಿರುವ ಎಲ್ಲಾ ಭದ್ರತಾ ಕಾರ್ಯವಿಧಾನಗಳನ್ನು ತಕ್ಷಣವೇ ಪ್ರಾರಂಭಿಸಲಾಯಿತು. ವಿಮಾನ ಸುರಕ್ಷಿತವಾಗಿ ಇಳಿಯಿತು. ಎಲ್ಲಾ ಕಡ್ಡಾಯ ಭದ್ರತಾ ಪರಿಶೀಲನೆಗಳು ಪೂರ್ಣಗೊಂಡ ನಂತರ ವಿಮಾನವನ್ನು ಕಾರ್ಯಾಚರಣೆಗೆ ಒಳಪಡಿಸಲಾಗುತ್ತದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಇದೀಗ ಸೋಮವಾರದಿಂದ ಸತತ ಬಾಂಬ್ ಬೆದರಿಕೆಗಳು ಬರುತ್ತಿರುವ ಕಾರಣ ದೆಹಲಿ, ಮುಂಬೈ, ಚೆನ್ನೈ, ತಿರುವನಂಪುರಂ ಹಾಗೂ ಹೈದರಾಬಾದ್ ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಸದ್ಯ ಇಮೇಲ್ ಬೆದರಿಕೆ ಕುರಿತು ತನಿಖೆ ನಡೆಯುತ್ತಿದೆ, ಇದು ಹುಸಿ ಬಾಂಬ್ ಕರೆಯೇ ಅನ್ನೋದು ಅಧಿಕಾರಿಗಳು ತನಿಖೆ ತೀವ್ರಗೊಳಿಸಿದ್ದಾರೆ.

Most Read

error: Content is protected !!