Friday, December 19, 2025

ತುಮಕೂರು ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ: ಬಿಗಿ ಭದ್ರತೆಯಲ್ಲಿ ಶೋಧ ಕಾರ್ಯ

ಹೊಸದಿಗಂತ ತುಮಕೂರು:

ಜಿಲ್ಲಾಧಿಕಾರಿಗಳ ಕಚೇರಿಗೆ ಇಂದು ಬೆಳಗ್ಗೆ ಬಂದ ಬಾಂಬ್ ಬೆದರಿಕೆ ಇ-ಮೇಲ್‌ನಿಂದಾಗಿ ಇಡೀ ಜಿಲ್ಲಾಡಳಿತ ಕಚೇರಿಯಲ್ಲಿ ಕೆಲಕಾಲ ತೀವ್ರ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.

ಬೆಳಗ್ಗೆ ಸುಮಾರು 7 ಗಂಟೆಗೆ ಡಿಸಿ ಅವರ ಅಧಿಕೃತ ಇ-ಮೇಲ್‌ ವಿಳಾಸಕ್ಕೆ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಸಂದೇಶ ಬಂದಿತ್ತು. ವಿಷಯ ತಿಳಿಯುತ್ತಿದ್ದಂತೆ, ಜಿಲ್ಲಾಡಳಿತ ಕಚೇರಿಗೆ ಶ್ವಾನ ದಳ, ಬಾಂಬ್ ನಿಷ್ಕ್ರಿಯ ದಳ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಧಾವಿಸಿತು.

ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅಶೋಕ್ ಅವರ ನೇತೃತ್ವದಲ್ಲಿ ಇಡೀ ಡಿಸಿ ಕಚೇರಿ ಸಂಕೀರ್ಣ ಮತ್ತು ಸುತ್ತಮುತ್ತಲಿನ ಕಚೇರಿಗಳ ಪ್ರತಿ ಮೂಲೆಯಲ್ಲಿ ಕೂಲಂಕಷ ಪರಿಶೀಲನೆ ನಡೆಸಲಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಶೋಧ ಕಾರ್ಯದ ಬಳಿಕ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಲಿಲ್ಲ.

ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ಖಚಿತವಾದ ನಂತರ, ಆತಂಕದ ವಾತಾವರಣ ತಿಳಿಗೊಂಡಿತು. ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಮತ್ತೆ ಕಚೇರಿಯೊಳಗೆ ಪ್ರವೇಶಿಸಲು ಅನುಮತಿ ನೀಡಲಾಯಿತು.

ನಂತರ ಮಾತನಾಡಿದ ಎಸ್ಪಿ ಅಶೋಕ್, “ಬೆಳಗ್ಗೆ ಬಾಂಬ್ ಬೆದರಿಕೆ ಇ-ಮೇಲ್ ಬಂದ ತಕ್ಷಣ ನಾವು ಎಚ್ಚೆತ್ತುಕೊಂಡು ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳವನ್ನು ಕರೆಸಿ ಪರಿಶೀಲನೆ ನಡೆಸಿದೆವು. ಯಾವುದೇ ಸ್ಪೋಟಕಗಳು ಪತ್ತೆಯಾಗಿಲ್ಲ. ಇದೊಂದು ಗಂಭೀರ ವಿಚಾರ. ನಾವು ಕೂಡಲೇ ಎಫ್‌ಐಆರ್ ದಾಖಲಿಸಿ ಕೂಲಂಕಷ ತನಿಖೆ ಕೈಗೊಳ್ಳುತ್ತೇವೆ. ಇ-ಮೇಲ್‌ನ ಹೆಡರ್ ಕನ್ನಡದಲ್ಲಿದ್ದರೂ, ಬಾಡಿ (ವಿಷಯ) ಇಂಗ್ಲಿಷ್‌ನಲ್ಲಿರುವುದರ ಬಗ್ಗೆಯೂ ತನಿಖೆ ಮಾಡಲಾಗುವುದು” ಎಂದು ತಿಳಿಸಿದರು.

ಮುಂದಿನ ಎರಡು-ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಡಿಸಿ ಕಚೇರಿಯ ಪ್ರವೇಶದ್ವಾರದಲ್ಲಿ ಮೆಟೆಲ್ ಡಿಟೆಕ್ಟರ್ ಅಳವಡಿಸಿ, ಎಲ್ಲರನ್ನೂ ಕಡ್ಡಾಯವಾಗಿ ಪರಿಶೀಲಿಸಿದ ನಂತರವೇ ಒಳಗೆ ಬಿಡಲಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ನಗರದ ಇತರ ಪ್ರಮುಖ ಸ್ಥಳಗಳನ್ನೂ ಪರಿಶೀಲಿಸಲಾಗುವುದು ಎಂದು ಎಸ್ಪಿ ಅಶೋಕ್ ಹೇಳಿದರು.

error: Content is protected !!