ಹೊಸದಿಗಂತ ಹಾವೇರಿ:
ಬಹಳ ದಿನಗಳಿಂದ ಚರ್ಚೆಯಲ್ಲಿರುವ ವರದಾ-ಬೇಡ್ತಿ ನದಿ ಜೋಡಣೆ ಯೋಜನೆಯ ಪರವಾಗಿ ಹಾವೇರಿ ಜಿಲ್ಲೆಯಲ್ಲಿ ಬೃಹತ್ ಜನಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಸಂಸದ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಮಠಾಧೀಶರು ಹಾಗೂ ಜನಪ್ರತಿನಿಧಿಗಳ ನೇತೃತ್ವದಲ್ಲಿ ನಡೆಯಲಿರುವ ಈ ಸಮಾವೇಶದ ಮೂಲಕ ಯೋಜನೆಯ ಅನಿವಾರ್ಯತೆಯನ್ನು ಜನರಿಗೆ ತಲುಪಿಸುವುದು ನಮ್ಮ ಗುರಿ ಎಂದು ಅವರು ಹೇಳಿದರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಕುರಿತು ಪ್ರತಿಕ್ರಿಯಿಸಿದ ಅವರು, “ಈ ಯೋಜನೆ 1994ರಿಂದಲೇ ಅಸ್ತಿತ್ವದಲ್ಲಿದೆ. ಪ್ರಸ್ತುತ ವಿನ್ಯಾಸದ ಪ್ರಕಾರ ಯಾವುದೇ ಅರಣ್ಯ ನಾಶವಾಗಲಿ ಅಥವಾ ಪರಿಸರಕ್ಕೆ ಹಾನಿಯಾಗಲಿ ಸಂಭವಿಸುವುದಿಲ್ಲ. ಬೇಡ್ತಿ ನದಿಯಿಂದ ಕೇವಲ ಹೆಚ್ಚುವರಿ ನೀರನ್ನು ಮಾತ್ರ ಎತ್ತಲಾಗುತ್ತಿದ್ದು, ಇದರಿಂದ ಯಾರಿಗೂ ನಷ್ಟವಿಲ್ಲ,” ಎಂದು ಸ್ಪಷ್ಟಪಡಿಸಿದರು.
ಯೋಜನೆಯ ಸುತ್ತ ಹರಡಿರುವ ಗೊಂದಲಗಳನ್ನು ನಿವಾರಿಸಲು ರಾಜ್ಯ ಸರ್ಕಾರ ಕೂಡಲೇ ನೀರಾವರಿ ತಜ್ಞರು ಹಾಗೂ ಪರಿಸರ ವಿಜ್ಞಾನಿಗಳ ಸಭೆ ಕರೆಯಬೇಕು. ವಾಸ್ತವಾಂಶಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಸೌಹಾರ್ದಯುತವಾಗಿ ಈ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.
“ನದಿಗಳು ಒಂದು ರಾಜ್ಯ ಅಥವಾ ಭಾಗಕ್ಕೆ ಸೀಮಿತವಲ್ಲ. ಕೃಷ್ಣಾ ನದಿಯಂತೆ ಇವು ಸಾರ್ವಜನಿಕ ಆಸ್ತಿ. ನಮ್ಮ ಭಾಗದ ಬರಗಾಲ ನೀಗಿಸಲು ಮಳೆಗಾಲದ ನೀರನ್ನು ಸಂಗ್ರಹಿಸುವುದು ಅನಿವಾರ್ಯ. ಈ ಯೋಜನೆಯನ್ನು ಭಾವನಾತ್ಮಕವಾಗಿ ನೋಡದೆ, ವೈಜ್ಞಾನಿಕವಾಗಿ ಚರ್ಚಿಸಲು ನಾವು ಸಿದ್ಧರಿದ್ದೇವೆ,” ಎಂದು ಬೊಮ್ಮಾಯಿ ತಿಳಿಸಿದರು. ಡಿಪಿಆರ್ ಸಿದ್ಧವಾದ ಕೂಡಲೇ ಸರ್ಕಾರ ಸಮಗ್ರ ಚರ್ಚೆಗೆ ವೇದಿಕೆ ಒದಗಿಸಬೇಕು ಎಂಬುದು ಅವರ ಪ್ರಮುಖ ಆಗ್ರಹವಾಗಿದೆ.

