ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೌಟುಂಬಿಕ ಕಲಹದ ಹಿನ್ನಲೆ ನಾಲ್ಕು ವರ್ಷದ ಮಗಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಜಯನಗರದಲ್ಲಿ ನಡೆದಿದೆ.
ಸಂಜಯನಗರ ಕೃಷ್ಣಪ್ಪ ಲೇಔಟ್‌ನಲ್ಲಿ ನಿನ್ನೆ ಸಂಜೆ ಸುಮಾರು 7.30ರ ವೇಳೆಗೆ ಸೀತಾ (29) ಹಾಗೂ ಅವರ ಮಗಳು ಸೃಷ್ಟಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ್ದಾರೆ. ಸಂಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳೀಯರು ತಕ್ಷಣವೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಇಬ್ಬರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಪೊಲೀಸರ ಪ್ರಾಥಮಿಕ ತನಿಖೆ ಪ್ರಕಾರ, ಸೀತಾ ಮತ್ತು ಅವರ ಪತಿ ಗೋವಿಂದ್ ಬಹದ್ದೂರ್ ನೇಪಾಳ ಮೂಲದವರಾಗಿದ್ದು, ಬೆಂಗಳೂರಿನಲ್ಲಿ ಮನೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಗೋವಿಂದ್ ಕೆಲ ತಿಂಗಳುಗಳಿಗೊಮ್ಮೆ ಕೆಲಸ ಹಾಗೂ ವೈಯಕ್ತಿಕ ಕಾರಣಗಳಿಂದ ನೇಪಾಳಕ್ಕೆ ಹೋಗಿ ದೀರ್ಘಕಾಲ ಮರಳದೆ ಇರುವುದರಿಂದ ದಂಪತಿಗಳ ನಡುವೆ ಆಗಾಗ ಕಲಹ ಉಂಟಾಗುತ್ತಿತ್ತು. ಇತ್ತೀಚೆಗೆ ಪತಿ ಸುಮಾರು ಐದು ರಿಂದ ಆರು ತಿಂಗಳು ಮನೆಗೆ ಬರದೇ ಇದ್ದ ಕಾರಣ ಸೀತಾ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎನ್ನಲಾಗಿದೆ.
ಘಟನೆ ನಡೆದ ದಿನವೂ ಪತಿ-ಪತ್ನಿ ನಡುವೆ ಫೋನ್ ಮೂಲಕ ಜಗಳ ನಡೆದಿತ್ತು. ಈ ಜಗಳದ ನಂತರ ನಿರಾಶೆಗೆ ಒಳಗಾದ ಸೀತಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿಕೊಂಡಿದ್ದು, ಮಗಳು ಕೂಡ ಆಕೆಯ ಜೊತೆಗೆ ಸಿಲುಕಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪತಿ ಗೋವಿಂದ್ ಅವರನ್ನು ಸಂಪರ್ಕಿಸಿ ವಿಚಾರಣೆ ನಡೆಸಲು ಕ್ರಮ ಕೈಗೊಳ್ಳಲಾಗಿದೆ.


