ಹೊಸದಿಗಂತ ಡಿಜಿಟಲ್ ಡೆಸ್ಕ್:
ಈ ವರ್ಷದ ಡಿಸೆಂಬರ್ 25 ಸ್ಯಾಂಡಲ್‌ವುಡ್ ಪಾಲಿಗೆ ಅಕ್ಷರಶಃ ಹಬ್ಬದ ದಿನವಾಗಿ ಮಾರ್ಪಟ್ಟಿದೆ. ಒಂದೆಡೆ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ‘45’ ಸಿನಿಮಾ ತೆರೆಕಂಡಿದ್ದರೆ, ಮತ್ತೊಂದೆಡೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ‘ಮಾರ್ಕ್’ ಸಿನಿಮಾ ಅದ್ದೂರಿಯಾಗಿ ಬಿಡುಗಡೆಯಾಗಿದೆ.
ಸುಮಾರು ಎರಡು ವರ್ಷಗಳ ಸುದೀರ್ಘ ಬಿಡುವಿನ ಬಳಿಕ ಬೆಳ್ಳಿತೆರೆ ಮೇಲೆ ಸುದೀಪ್ ಕಾಣಿಸಿಕೊಂಡಿದ್ದಾರೆ. ವಿಜಯ್ ಕಾರ್ತಿಕ್ ನಿರ್ದೇಶನದ ಈ ಸಿನಿಮಾದಲ್ಲಿ ಕಿಚ್ಚ ಹಿಂದೆಂದೂ ಕಾಣದ ವಿಭಿನ್ನ ಅವತಾರದಲ್ಲಿ ಮಿಂಚಿದ್ದಾರೆ. ಚಿತ್ರದ ‘ಮಲೈಕಾ’ ಹಾಡು ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಸುದೀಪ್ ಅವರ ಭರ್ಜರಿ ಡ್ಯಾನ್ಸ್ ಅಭಿಮಾನಿಗಳನ್ನು ಆಶ್ಚರ್ಯಚಕಿತರನ್ನಾಗಿ ಮಾಡಿದೆ.
ಮೂರು ಸೂಪರ್ ಸ್ಟಾರ್‌ಗಳಿರುವ ‘45’ ಸಿನಿಮಾ ಪ್ರಬಲ ಸ್ಪರ್ಧೆ ನೀಡುತ್ತಿದ್ದರೂ, ‘ಮಾರ್ಕ್’ ಸಿನಿಮಾ ತನ್ನದೇ ಆದ ಕ್ರೇಜ್ ಸೃಷ್ಟಿಸಿದೆ. ಥಿಯೇಟರ್‌ಗಳ ಹಂಚಿಕೆ ಹಾಗೂ ಪೈರಸಿ ಭೀತಿಯ ನಡುವೆಯೂ ವೀಕ್ಷಕರು ಚಿತ್ರಮಂದಿರಗಳತ್ತ ಲಗ್ಗೆ ಇಡುತ್ತಿದ್ದಾರೆ. ವರ್ಷದ ಕೊನೆಯ ರಜಾ ದಿನಗಳಾಗಿರುವುದರಿಂದ ಎರಡೂ ಸಿನಿಮಾಗಳಿಗೆ ಸಿನಿಪ್ರೇಮಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
“ಸಿನಿಮಾದಲ್ಲಿ ಕಂಟೆಂಟ್ ಚೆನ್ನಾಗಿದ್ದರೆ ಮಾತ್ರ ಜನ ಮೆಚ್ಚುತ್ತಾರೆ. ನಾವು ಪ್ರಾಮಾಣಿಕವಾಗಿ ವಿಭಿನ್ನ ಪ್ರಯತ್ನ ಮಾಡಿದ್ದೇವೆ, ಜನರಿಗೆ ಈ ಸಿನಿಮಾ ಖಂಡಿತ ಇಷ್ಟವಾಗುತ್ತದೆ,” ಎಂದು ಸುದೀಪ್ ಅವರು ಸಿನಿಮಾ ಬಿಡುಗಡೆಗೂ ಮುನ್ನ ವಿಶ್ವಾಸ ವ್ಯಕ್ತಪಡಿಸಿದ್ದರು. ಅವರ ನಂಬಿಕೆಗೆ ತಕ್ಕಂತೆ ನಿಶ್ವಿಕಾ ನಾಯ್ಡು ಅವರ ನೃತ್ಯ ಹಾಗೂ ಯೋಗಿ ಬಾಬು ಅವರ ಕಾಮಿಡಿ ಚಿತ್ರಕ್ಕೆ ಪ್ಲಸ್ ಪಾಯಿಂಟ್ ಆಗಿದೆ.
ಚಿತ್ರತಂಡ ಹಂಚಿಕೊಂಡಿರುವ ಅಧಿಕೃತ ಮಾಹಿತಿಯಂತೆ, ‘ಮಾರ್ಕ್’ ಸಿನಿಮಾ ಮೊದಲ ದಿನವೇ ಬರೊಬ್ಬರಿ 15.9 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವೀಕೆಂಡ್ ಹತ್ತಿರವಿರುವುದರಿಂದ ಮುಂದಿನ ದಿನಗಳಲ್ಲಿ ಈ ಕಲೆಕ್ಷನ್ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ ಎಂದು ಗಾಂಧಿನಗರದ ಮೂಲಗಳು ತಿಳಿಸಿವೆ.

