ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಷನ್‌ನ ಬ್ಲಾಕ್‌ಬಸ್ಟರ್ ಸಿನಿಮಾ ‘ಪುಷ್ಪ 2: ದಿ ರೂಲ್’ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಕಳೆದ ಡಿಸೆಂಬರ್ 5ರಂದು ಬಿಡುಗಡೆಯಾಗಿದ್ದ ಈ ಚಿತ್ರ, ವಿಶ್ವಾದ್ಯಂತ ಬರೋಬ್ಬರಿ 1700 ಕೋಟಿ ರೂಪಾಯಿಗೂ ಅಧಿಕ ಮೊತ್ತವನ್ನು ಕೊಳ್ಳೆ ಹೊಡೆಯುವ ಮೂಲಕ ದಾಖಲೆಗಳನ್ನು ಪುಡಿಗಟ್ಟಿತ್ತು. ಈಗ ಈ ‘ಪುಷ್ಪ’ ಹವಾ ವಿದೇಶದಲ್ಲೂ ಮುಂದುವರಿದಿದೆ.
ಭಾರತದಲ್ಲಿ ಸಂಚಲನ ಮೂಡಿಸಿದ್ದ ಪುಷ್ಪರಾಜ ಈಗ ಜಪಾನ್ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾನೆ. ಜನವರಿ 16ರಂದು ಜಪಾನ್‌ನಲ್ಲಿ ಅಧಿಕೃತವಾಗಿ ಚಿತ್ರ ಬಿಡುಗಡೆಯಾಗುತ್ತಿದ್ದು, ಈಗಾಗಲೇ ಅಲ್ಲಿ ನಡೆದ ಪ್ರೀಮಿಯರ್ ಶೋಗಳಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಪಾನಿನ ಸಿನಿಪ್ರಿಯರು ಅಲ್ಲು ಅರ್ಜುನ್ ಅವರ ಮ್ಯಾನರಿಸಂ ಹಾಗೂ ನಟನೆಗೆ ಮನಸೋತಿದ್ದಾರೆ.
ಮತ್ತೊಂದೆಡೆ, ಮಕರ ಸಂಕ್ರಾಂತಿಯ ಸಂಭ್ರಮದಲ್ಲೇ ಅಲ್ಲು ಅರ್ಜುನ್ ತಮ್ಮ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಅಪ್‌ಡೇಟ್ ನೀಡಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ‘ಜವಾನ್’ ಖ್ಯಾತಿಯ ನಿರ್ದೇಶಕ ಅಟ್ಲಿ ಜೊತೆ ಸಿನಿಮಾ (AA22) ಮಾಡಲಿರುವ ಬನ್ನಿ, ಆ ನಂತರ ಕಾಲಿವುಡ್‌ನ ಮಾಸ್ಟರ್ ಮೈಂಡ್ ಲೋಕೇಶ್ ಕನಗರಾಜ್ ಜೊತೆ ಕೈಜೋಡಿಸಲಿದ್ದಾರೆ (AA23). ಈ ಮೂಲಕ ಬ್ಯಾಕ್-ಟು-ಬ್ಯಾಕ್ ಮೆಗಾ ಸಿನಿಮಾಗಳ ಘೋಷಣೆಯಾಗಿದ್ದು, ಸಿನಿಪ್ರಿಯರಲ್ಲಿ ಕುತೂಹಲ ದುಪ್ಪಟ್ಟಾಗಿದೆ.


