ಹೊಸದಿಗಂತ ಡಿಜಿಟಲ್ ಡೆಸ್ಕ್:
ಕುರಿ ಕಾಯುತ್ತಿದ್ದ ವೇಳೆ ಕಾಲುವೆಗೆ ಬಿದ್ದು ಇಬ್ಬರು ಬಾಲಕರು ಮೃತಪಟ್ಟಿರುವ ಘಟನೆ ರಾಮದುರ್ಗ ತಾಲೂಕಿನ ಪದಮಂಡಿ ಗ್ರಾಮದ ಬಳಿ ನಡೆದಿದೆ. ಹಣಮಂತ ದುರ್ಗಪ್ಪ ಹಗೇದ (10), ಬಸವರಾಜ ರಮೇಶ ಸೋಮಣ್ಣವರ (10) ಮೃತರು.
ತಂದೆ ದುರ್ಗಪ್ಪ ಜೊತೆ ಕುರಿ ಕಾಯಲು ಬಾಲಕ ಹಣಮಂತ ಹಾಗೂ ಗೆಳೆಯ ಬಸವರಾಜ ಹೋಗಿದ್ದರು. ದುರ್ಗಪ್ಪ ಕುರಿ ಕಾಯುತ್ತಾ ಮುಂದೆ ಹೋಗುತ್ತಿದ್ದಂತೆ ಬಾಲಕರು ಅವರ ಕಣ್ತಪ್ಪಿಸಿ ಕಾಲುವೆಯಲ್ಲಿ ಈಜಲು ಹೋಗಿದ್ದಾರೆ.
ಹಿಂದೆ ಬರುತ್ತಿದ್ದ ಮಕ್ಕಳು ಕಾಣದೇ ಇದ್ದಾಗ ಮರಳಿ ಹೋಗಿ ಹುಡುಕಾಡಿದ ದುರ್ಗಪ್ಪ ಅವರಿಗೆ ಕಾಲುವೆ ಬಳಿ ಮಕ್ಕಳ ಬಟ್ಟೆಗಳು ಸಿಕ್ಕಿವೆ. ಕಾಲುವೆಯಲ್ಲಿ ನೋಡಿದಾಗ ಮಕ್ಕಳು ಕಂಡಿಲ್ಲ. ಬಳಿಕ ನೀರಿನಲ್ಲಿ ಇಬ್ಬರೂ ಮುಳುಗಿ ಮೃತಪಟ್ಟಿರುವುದು ಗೊತ್ತಾಗಿದೆ.
ಸ್ಥಳೀಯರ ನೆರವಿನೊಂದಿಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಮೃತದೇಹಗಳನ್ನು ಕಾಲುವೆಯಿಂದ ಹೊರ ತೆಗೆದಿದ್ದಾರೆ. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮರಣೋತ್ತರ ಪರೀಕ್ಷೆಯ ಬಳಿಕ ಇಬ್ಬರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

