January21, 2026
Wednesday, January 21, 2026
spot_img

ಮಾನವ-ಪ್ರಾಣಿ ಸಂಘರ್ಷಕ್ಕೆ ಬ್ರೇಕ್: ನಾಗರಹೊಳೆ ರಾತ್ರಿ ಸಫಾರಿ ಶಾಶ್ವತವಾಗಿ ಬಂದ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ ಮತ್ತು ಪ್ರಾಣಿಗಳ ನಡುವಿನ ಸಂಘರ್ಷವನ್ನು ಗಂಭೀರವಾಗಿ ಪರಿಗಣಿಸಿರುವ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ರಾತ್ರಿ ಸಫಾರಿ ಟ್ರಿಪ್‌ಗಳನ್ನು ಶಾಶ್ವತವಾಗಿ ನಿಲ್ಲಿಸುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಬೀದರ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 10 ವರ್ಷಗಳ ದಾಖಲೆಗಳ ಪ್ರಕಾರ, ಮಾನವ-ಪ್ರಾಣಿ ಸಂಘರ್ಷದಿಂದ 45ರಿಂದ 60 ಜನರು ಮೃತಪಟ್ಟಿದ್ದಾರೆ. “ಒಂದೇ ಒಂದು ಸಾವುಗಳಾಗಬಾರದು ಎಂಬುದು ನಮ್ಮ ಉದ್ದೇಶ. ಮನುಷ್ಯ ಜೀವ ಅತ್ಯಮೂಲ್ಯವಾದದ್ದು, ಹೀಗಾಗಿ ನಾವು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದೇವೆ,” ಎಂದು ಸಚಿವರು ಸ್ಪಷ್ಟಪಡಿಸಿದರು.

ರಾತ್ರಿ 6 ಗಂಟೆಯ ನಂತರ ನಡೆಯುತ್ತಿದ್ದ ಸಫಾರಿಗಳಿಂದಾಗಿ ವನ್ಯಜೀವಿಗಳಿಗೆ ತೀವ್ರ ತೊಂದರೆಯಾಗುತ್ತಿತ್ತು ಮತ್ತು ಪ್ರಾಣಿಗಳು ಅರಣ್ಯದಿಂದ ಹೊರಬರಲು ಇದು ಕಾರಣವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ, ಪ್ರಾಣಿಗಳ ನೆಮ್ಮದಿ ಮತ್ತು ಮಾನವ ಜೀವ ರಕ್ಷಣೆಯ ದೃಷ್ಟಿಯಿಂದ ಕೊನೆಯ ಸಫಾರಿ ಟ್ರಿಪ್ ಅನ್ನು ಶಾಶ್ವತವಾಗಿ ನಿಲ್ಲಿಸುತ್ತಿದ್ದೇವೆ ಎಂದು ಸಚಿವ ಖಂಡ್ರೆ ತಿಳಿಸಿದ್ದಾರೆ.

ಇದೇ ವೇಳೆ, ಅರಣ್ಯ ಇಲಾಖೆಯು ಹಸುಗಳ ಸರ್ವೆಗೆ ಮುಂದಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ತಮಿಳುನಾಡಿನಿಂದ ಸುಮಾರು 20 ಸಾವಿರ ಜಾನುವಾರುಗಳು ರಾಜ್ಯದ ಅರಣ್ಯಗಳಲ್ಲಿ ಮೇಯುತ್ತಿವೆ ಎಂದು ಮಾಹಿತಿ ನೀಡಿದರು.

“ಮೊದಲಿನಿಂದಲೂ ಮೇವು ಮತ್ತು ದೊಡ್ಡಿಗಳನ್ನು ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ. ಆದರೆ, ವಿಷಪ್ರಾಶನದಿಂದ ಐದು ಹುಲಿಗಳ ಸಾವಿನ ಘಟನೆ ನಡೆದ ನಂತರ ನಾನು ಕಟ್ಟುನಿಟ್ಟಿನ ಆದೇಶ ನೀಡಿದ್ದೇನೆ,” ಎಂದು ಹೇಳಿದರು.

“ಅರಣ್ಯ ಅಂಚಿನಲ್ಲಿರುವ ನಮ್ಮ ರಾಜ್ಯದ ರೈತರಿಗೆ ಜಾನುವಾರುಗಳನ್ನು ಮೇಯಿಸಲು ಅನುಮತಿ ಇದ್ದರೂ, ಬೇರೆ ರಾಜ್ಯಗಳ ಜಾನುವಾರುಗಳು ಮೇಯಿಸಲು ಅವಕಾಶ ಇಲ್ಲ” ಎಂದು ಸಚಿವ ಖಂಡ್ರೆ ಘೋಷಿಸಿದ್ದಾರೆ.

ಈ ಕುರಿತು, ಅರಣ್ಯದಲ್ಲಿರುವ ಜಾನುವಾರುಗಳ ಸರ್ವೆ ನಡೆಸಿ, ಅಂಕಿ-ಅಂಶಗಳನ್ನು ಪಡೆದು ಎಲ್ಲರ ಸಹಕಾರದೊಂದಿಗೆ ಒಂದು ನಿರ್ಣಯ ಕೈಗೊಳ್ಳುವ ಕೆಲಸ ಮಾಡಲಾಗುವುದು ಎಂದು ಅವರು ತಿಳಿಸಿದರು.

Must Read