ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಹಿಂದಿ ಭಾಷೆಯ ಹೋರ್ಡಿಂಗ್‌ಗಳು, ಬೋರ್ಡ್‌ಗಳು, ಚಲನಚಿತ್ರಗಳು ಮತ್ತು ಹಾಡುಗಳ ಪ್ರದರ್ಶನವನ್ನು ನಿಷೇಧಿಸುವ ಪ್ರಸ್ತಾವಿತ ಮಸೂದೆಯನ್ನು ಮಂಡಿಸದಿರಲು ತಮಿಳುನಾಡು ಸರ್ಕಾರವು ನಿರ್ಧರಿಸಿದೆ. ಈ ವಿಚಾರವಾಗಿ ಸಾರ್ವಜನಿಕವಾಗಿ ಮತ್ತು ರಾಜಕೀಯ ವಲಯದಲ್ಲಿ, ವಿಶೇಷವಾಗಿ ತಮಿಳುನಾಡು ಬಿಜೆಪಿಯಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಈ ಕಠಿಣ ನಿಷೇಧವನ್ನು ಜಾರಿಗೆ ತರಲು ಮಸೂದೆ ಮಂಡಿಸಲು ಸರ್ಕಾರ ಆರಂಭದಲ್ಲಿ ಸಿದ್ಧತೆ ನಡೆಸಿತ್ತು. ಸರ್ಕಾರಿ ಮೂಲಗಳ ಪ್ರಕಾರ, ಪ್ರಸ್ತಾವಿತ ಮಸೂದೆ ಸಂವಿಧಾನದ ವ್ಯಾಪ್ತಿಯಲ್ಲಿಯೇ ಇರಲಿದೆ. ಇದರ ಬಗ್ಗೆ ಮಂಗಳವಾರ ರಾತ್ರಿ ಕಾನೂನು ತಜ್ಞರೊಂದಿಗೆ ತುರ್ತು ಸಭೆ ಸಹ ನಡೆಸಲಾಗಿತ್ತು.
ಈ ಬೆಳವಣಿಗೆಗಳ ಕುರಿತು ಮಾತನಾಡಿದ ಹಿರಿಯ ಡಿಎಂಕೆ ನಾಯಕ ಟಿಕೆಎಸ್ ಇಳಂಗೋವನ್, “ನಾವು ಸಂವಿಧಾನಕ್ಕೆ ವಿರುದ್ಧವಾಗಿ ಏನನ್ನೂ ಮಾಡುವುದಿಲ್ಲ. ನಾವು ಅದನ್ನು ಪಾಲಿಸುತ್ತೇವೆ. ಹಿಂದಿ ಹೇರಿಕೆಯನ್ನು ನಾವು ವಿರೋಧಿಸುತ್ತೇವೆ,” ಎಂದು ಸ್ಪಷ್ಟಪಡಿಸಿದರು.
ಸರ್ಕಾರದ ಆರಂಭಿಕ ಪ್ರಸ್ತಾಪಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ, ಈ ನಿರ್ಧಾರವನ್ನು ಖಂಡಿಸಿತ್ತು. ಬಿಜೆಪಿ ನಾಯಕ ವಿನೋಜ್ ಸೆಲ್ವಂ, ಸರ್ಕಾರದ ಕ್ರಮವನ್ನು “ಮೂರ್ಖತನ ಮತ್ತು ಅಸಂಬದ್ಧ ನಿರ್ಧಾರ” ಎಂದು ಟೀಕಿಸಿದ್ದು, ಭಾಷೆಯನ್ನು ರಾಜಕೀಯ ಸಾಧನವಾಗಿ ಬಳಸಬಾರದು ಎಂದು ಹೇಳಿದ್ದರು. ರಾಜ್ಯದಲ್ಲಿ ಹಿಂದಿ ವಿರೋಧಿ ಭಾವನೆ ಪ್ರಬಲವಾಗಿದ್ದರೂ, ಮಸೂದೆಯನ್ನು ಮಂಡಿಸದಿರುವ ನಿರ್ಧಾರವು ಸದ್ಯಕ್ಕೆ ರಾಜಕೀಯ ಬಿಕ್ಕಟ್ಟನ್ನು ಶಮನಗೊಳಿಸಿದೆ.

