ಹೊಸದಿಗಂತ ಡಿಜಿಟಲ್ ಡೆಸ್ಕ್:
2026ರ ಟಿ20 ವಿಶ್ವಕಪ್‌ನ ಆರಂಭಿಕ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯದಿಂದ ಕಂಗೆಟ್ಟಿದ್ದ ಟೀಮ್ ಇಂಡಿಯಾ, ಇದೀಗ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅಕ್ಷರಶಃ ಅಬ್ಬರಿಸಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಸೋಲಿನ ಕಹಿಯನ್ನು ಮರೆತ ಭಾರತೀಯ ಬ್ಯಾಟರ್‌ಗಳು, ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಅಟ್ಟುವ ಮೂಲಕ ದಾಖಲೆಗಳ ಪುಟವನ್ನು ಹೊಸದಾಗಿ ಬರೆದಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಆರಂಭಿಕ ಅಭಿಷೇಕ್ ಶರ್ಮಾ (55) ಸ್ಪೋಟಕ ಆರಂಭ ನೀಡಿದರು. ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಕಿಶನ್ (38), ಸೂರ್ಯಕುಮಾರ್ ಯಾದವ್ (33) ಮತ್ತು ಸಂಜು ಸ್ಯಾಮ್ಸನ್ (24) ಉಪಯುಕ್ತ ರನ್ ಕಾಣಿಕೆ ನೀಡಿದರು. ಆದರೆ ಪಂದ್ಯದ ಅಂತಿಮ ಹಂತದಲ್ಲಿ ಅಬ್ಬರಿಸಿದ ಹಾರ್ದಿಕ್ ಪಾಂಡ್ಯ (ಅಜೇಯ 50) ಮತ್ತು ತಿಲಕ್ ವರ್ಮಾ (ಅಜೇಯ 44) ಭಾರತದ ಮೊತ್ತವನ್ನು 250ರ ಗಡಿ ದಾಟಿಸಿದರು. ಭಾರತ ನಿಗದಿತ 20 ಓವರ್‌ಗಳಲ್ಲಿ ಬರೋಬ್ಬರಿ 256 ರನ್ ಕಲೆಹಾಕಿತು.
ಈ ಬೃಹತ್ ಮೊತ್ತದೊಂದಿಗೆ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ತನ್ನದೇ ಆದ ಹಳೆಯ ದಾಖಲೆಯನ್ನು ಅಳಿಸಿಹಾಕಿದೆ.
ಹೊಸ ದಾಖಲೆ: 256/ಭಾರತ (ವಿರುದ್ಧ ಜಿಂಬಾಬ್ವೆ, 2026)
ಹಳೆಯ ದಾಖಲೆ: 218/ಭಾರತ (ವಿರುದ್ಧ ಇಂಗ್ಲೆಂಡ್, 2007)
ಭಾರತ ತಂಡವು ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಎರಡನೇ ತಂಡ ಎಂಬ ಕೀರ್ತಿಗೆ ಭಾಜನವಾಗಿದೆ. ಕೇವಲ 4 ರನ್‌ಗಳ ಅಂತರದಿಂದ ಶ್ರೀಲಂಕಾ (260 ರನ್, ವಿರುದ್ಧ ಕೀನ್ಯಾ, 2007) ಹೆಸರಿನಲ್ಲಿದ್ದ ವಿಶ್ವ ದಾಖಲೆಯನ್ನು ಮುರಿಯುವ ಅವಕಾಶ ತಪ್ಪಿಸಿಕೊಂಡಿತು. ಆದಾಗ್ಯೂ, ಒಟ್ಟಾರೆ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಭಾರತ ದಾಖಲಿಸಿದ 5ನೇ ಗರಿಷ್ಠ ಮೊತ್ತ ಇದಾಗಿದೆ.



