Tuesday, January 13, 2026
Tuesday, January 13, 2026
spot_img

ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ್ರೆ ಜೇಬಿಗೆ ಕತ್ತರಿ ಮಾತ್ರವಲ್ಲ, ಇನ್ಮುಂದೆ ಎಫ್‌ಐಆರ್ ಫಿಕ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ರಸ್ತೆಗಳಲ್ಲಿ ಸಂಚಾರ ಪೊಲೀಸರು ಇಲ್ಲ ಅಥವಾ ಕ್ಯಾಮರಾ ಕಣ್ಣಿಗೆ ಕಾಣಿಸುವುದಿಲ್ಲ ಎಂದು ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರುವವರಿಗೆ ಇನ್ಮುಂದೆ ಕಠಿಣ ಶಿಕ್ಷೆ ಕಾದಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಕೇವಲ ದಂಡಕ್ಕೆ ಸೀಮಿತಗೊಳಿಸದೆ, ಬೆಂಗಳೂರು ಪೊಲೀಸರು ಈಗ ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲು ಮುಂದಾಗಿದ್ದಾರೆ.

ಪಶ್ಚಿಮ ವಿಭಾಗದ ಡಿಸಿಪಿ ಅನೂಪ್ ಶೆಟ್ಟಿ ಅವರ ಪ್ರಕಾರ, ಬೆಂಗಳೂರಿನಲ್ಲಿ ಸಂಚಾರ ನಿಯಮಗಳ ಉಲ್ಲಂಘನೆ ಮಿತಿ ಮೀರುತ್ತಿದೆ. 2025ರ ಅಂಕಿಅಂಶಗಳ ಪ್ರಕಾರ, ಲಕ್ಷಾಂತರ ಸಿಗ್ನಲ್ ಜಂಪಿಂಗ್ ಮತ್ತು ನೋ-ಎಂಟ್ರಿ ಪ್ರಕರಣಗಳು ದಾಖಲಾಗಿವೆ. ಇದು ಕೇವಲ ಟ್ರಾಫಿಕ್ ಕಿರಿಕಿರಿ ಮಾತ್ರವಲ್ಲದೆ, ಮಾರಣಾಂತಿಕ ಅಪಘಾತಗಳಿಗೂ ಕಾರಣವಾಗುತ್ತಿದೆ.

ಯಾವೆಲ್ಲಾ ತಪ್ಪುಗಳಿಗೆ ಎಫ್‌ಐಆರ್?

ಅತಿ ವೇಗವಾಗಿ ಅಥವಾ ನಿರ್ಲಕ್ಷ್ಯದಿಂದ ಸಿಗ್ನಲ್ ಮೀರಿ ಚಲಿಸಿದರೆ ಬಿಎನ್‌ಎಸ್ ಸೆಕ್ಷನ್ 281 (ಅಜಾಗರೂಕ ಚಾಲನೆ) ಅಡಿಯಲ್ಲಿ ಕೇಸ್ ಬೀಳಲಿದೆ.

ವಿರುದ್ಧ ದಿಕ್ಕಿನಲ್ಲಿ ವಾಹನ ಚಲಾಯಿಸುವುದು ಮತ್ತು ರಸ್ತೆ ಮಧ್ಯೆ ವಾಹನ ನಿಲ್ಲಿಸಿ ಅಡ್ಡಿಪಡಿಸಿದರೆ ಬಿಎನ್‌ಎಸ್ ಸೆಕ್ಷನ್ 285 ರಡಿ ಕ್ರಮ ಕೈಗೊಳ್ಳಲಾಗುತ್ತದೆ.

ಬಸ್ ನಿಲ್ದಾಣ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಂಚಾರಕ್ಕೆ ಅಡ್ಡಿಯಾಗುವಂತೆ ಆಟೋ ಅಥವಾ ಕಾರು ನಿಲ್ಲಿಸಿದರೂ ಬಿಡೋದಿಲ್ಲ.

ಹಿಂದೆ ದಂಡ ಕಟ್ಟಿ ಸುಲಭವಾಗಿ ತಪ್ಪಿಸಿಕೊಳ್ಳಬಹುದಾಗಿತ್ತು. ಆದರೆ ಈಗ ಎಫ್‌ಐಆರ್ ದಾಖಲಾದರೆ ಪೊಲೀಸರು ವಾಹನವನ್ನು ತಕ್ಷಣವೇ ವಶಪಡಿಸಿಕೊಳ್ಳುತ್ತಾರೆ. ವಾಹನ ಬಿಡಿಸಿಕೊಳ್ಳಲು ಮತ್ತು ಪ್ರಕರಣ ಇತ್ಯರ್ಥಕ್ಕೆ ನೀವು ನ್ಯಾಯಾಲಯಕ್ಕೆ ಅಲೆಯಬೇಕಾಗುತ್ತದೆ.

ಇದು ದೀರ್ಘಾವಧಿಯ ಕಾನೂನು ಪ್ರಕ್ರಿಯೆಯಾಗಿರುವುದರಿಂದ, ಸವಾರರಲ್ಲಿ ಭಯ ಮತ್ತು ಜವಾಬ್ದಾರಿ ಮೂಡಿಸುವುದು ಪೊಲೀಸರ ಮುಖ್ಯ ಉದ್ದೇಶವಾಗಿದೆ.

Most Read

error: Content is protected !!