February 19, 2026
Thursday, February 19, 2026
spot_img

ಎಪ್ಸ್ಟೀನ್ ಪ್ರಕರಣದಲ್ಲಿ ಬ್ರಿಟನ್​​ನ ಮಾಜಿ ಪ್ರಿನ್ಸ್ ಆಂಡ್ರ್ಯೂ ಬಂಧನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್‌ಸ್ಟೀನ್ ಜೊತೆಗಿನ ಸಂಬಂಧ ಬಹಿರಂಗವಾದ ಬೆನ್ನಲ್ಲೇ ಬ್ರಿಟಿಷ್ ರಾಜ ಚಾರ್ಲ್ಸ್ III ಅವರ ಸಹೋದರ ಮತ್ತು ಮಾಜಿ ರಾಜಕುಮಾರ ಆಂಡ್ರ್ಯೂ ಮೌಂಟ್ ಬ್ಯಾಟನ್-ವಿಂಡ್ಸರ್ ಅವರನ್ನು ಸಾರ್ವಜನಿಕ ಕಚೇರಿಯಲ್ಲಿ ದುಷ್ಕೃತ್ಯದ ಅನುಮಾನದ ಮೇಲೆ ಬಂಧಿಸಲಾಗಿದೆ.

ಸಾರ್ವಜನಿಕ ಕಚೇರಿಯಲ್ಲಿ ಅವರ 66ನೇ ಹುಟ್ಟುಹಬ್ಬದಂದೇ ಅರೆಸ್ಟ್ ಮಾಡಲಾಗಿದೆ. ಬ್ರಿಟನ್ ಪೊಲೀಸ್ ಪಡೆ ನಾರ್ಫೋಕ್‌ನಲ್ಲಿರುವ ಸ್ಯಾಂಡ್ರಿಂಗ್‌ಹ್ಯಾಮ್ ಎಸ್ಟೇಟ್‌ಗೆ ತಲುಪಿ ಬಂಧಿಸಿದೆ. ಮಾಜಿ ಯುಕೆ ರಾಜಕುಮಾರ 2010ರಲ್ಲಿ ಶಿಕ್ಷೆಗೊಳಗಾದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ಅವರಿಗೆ ವ್ಯಾಪಾರ ವರದಿಗಳನ್ನು ಕಳುಹಿಸಿದ್ದಾರೆ ಎಂಬ ವರದಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ ಎಂದು ಥೇಮ್ಸ್ ವ್ಯಾಲಿ ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ 66 ವರ್ಷ ವಯಸ್ಸಿನ ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಅವರ ಜನ್ಮದಿನವಾದ ಫೆಬ್ರವರಿ 19ರಂದೇ ಅವರು ಪೊಲೀಸರ ಅತಿಥಿಯಾಗಿದ್ದಾರೆ. ಬ್ರಿಟನ್ ನ ಅಧಿಕೃತ ವ್ಯಾಪಾರ ಪ್ರತಿನಿಧಿಯಾಗಿ ಕಾರ್ಯ ನಿರ್ವಹಿಸಿದ್ದ ಅವರು ಪ್ರಿನ್ಸ್ ಆಂಡ್ರ್ಯೂ ಎಂದೇ ಜನಪ್ರಿಯರಾಗಿದ್ದರು. ರಾಜಮನೆತನದ ಪ್ರಮುಖ ವ್ಯಕ್ತಿಯೊಬ್ಬರ ಬಂಧನವಾಗಿರುವುದು ಬ್ರಿಟನ್‌ನಲ್ಲಿ ಸಂಚಲನ ಮೂಡಿಸಿದೆ. ಈ ಬಗ್ಗ ಪ್ರತಿಕ್ರಿಯಿಸಿರುವ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್, “ಕಾನೂನಿಗಿಂತ ಯಾರೂ ಮಿಗಿಲಲ್ಲ” ಎಂದು ತಿಳಿಸಿದ್ದಾರೆ.

ಎಪ್ಸ್ಟೀನ್ ವಿವಾದದಲ್ಲಿ ಬ್ರಿಟನ್ ರಾಜಮನೆತನವನ್ನು ಕಳೆದೊಂದು ದಶಕದಿಂದ ಸಿಲುಕಿಕೊಂಡಿದೆ. ಜೆಫ್ರಿ ಎಪ್ಸ್ಟೀನ್ ಜೊತೆಗಿನ ನಂಟಿನ ಕಾರಣದಿಂದಾಗಿ ಆಂಡ್ರ್ಯೂ ಅವರು ಕಳೆದ ವರ್ಷವೇ ಬ್ರಿಟನ್ ರಾಜಮನೆತನದ ಎಲ್ಲ ಗೌರವ ಪದವಿ ಮತ್ತು ಮಿಲಿಟರಿ ಬಿರುದುಗಳನ್ನು ಕಳೆದುಕೊಂಡಿದ್ದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !