ಹೊಸದಿಗಂತ ಡಿಜಿಟಲ್ ಡೆಸ್ಕ್:
ತನ್ನ ಪತ್ನಿ ಜತೆ ತನ್ನ ತಮ್ಮ ಸಲುಗೆಯಿಂದ ಇದ್ದಾನೆ ಎಂಬ ಅನುಮಾನದಿಂದ ಸ್ವಂತ ಅಣ್ಣನೇ ತಮ್ಮನನ್ನು ಕೊಂದು, ಹೂತು ಹಾಕಿದ್ದ ಘಟನೆ ಪೊಲೀಸ್ ತನಿಖೆಯಿಂದ ಹೊರ ಬಂದಿದೆ.
ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಕನಕೊಪ್ಪ ಹೊಸೂರು ಗ್ರಾಮದ ರಾಮಚಂದ್ರ (28) ಹತ್ಯೆಗೊಂಡವ. ಮಾಲತೇಶ (35) ಆರೋಪಿ. ಪೊಲೀಸರ ವಿಚಾರಣೆ ವೇಳೆ ಕೃತ್ಯ ಬಯಲಿಗೆ ಬಂದಿದೆ.
ಕನಕೊಪ್ಪ ಹೊಸೂರು ಗ್ರಾಮದ ಗೌರಮ್ಮ ಎಂಬುವರಿಗೆ ಮಾಲತೇಶ ಹಾಗೂ ರಾಮಚಂದ್ರ ಎಂಬ ಇಬ್ಬರು ಮಕ್ಕಳು. ಇದರಲ್ಲಿ ಹಿರಿಯ ಮಗ ಮಾಲತೇಶನಿಗೆ ಕಳೆದ 8 ವರ್ಷಗಳ ಹಿಂದೆ ಮದುವೆಯಾಗಿತ್ತು. ಈಗ ಕಳೆದ 5 ವರ್ಷಗಳಿಂದ ಸೊರಬ ಪೊಲೀಸ್ ಠಾಣಾ ವ್ಯಾಪ್ತಿಯ ಜೇಡಿಗೆರೆ ಗ್ರಾಮ ಮಂಜುನಾಥ ಎಂಬುವರ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡು ಹೆಂಡತಿ ಜೊತೆ ಅಲ್ಲಿಯೇ ವಾಸವಾಗಿದ್ದನು.
ಮೃತ ರಾಮಚಂದ್ರ ತನ್ನ ತಾಯಿಯ ಜೊತೆ ಕನಕೂಪ್ಪ ಹೊಸೂರು ಗ್ರಾಮದಲ್ಲಿ ನೆಲೆಸಿದ್ದನು. ರಾಮಚಂದ್ರ ಸೆ. 08 ರಂದು ಮನೆಯಿಂದ ಕೂಲಿ ಕೆಲಸಕ್ಕೆಂದು ಹೋದವನು ವಾಪಸ್ ಬಂದಿರುವುದಿಲ್ಲ. ಇದರಿಂದ ತಾಯಿ ಗೌರಮ್ಮ ಆತನ ಕೊರಗಿನಲ್ಲಿಯೇ ಇರುತ್ತಾರೆ. ಗೌರಮ್ಮ ತನ್ನ ಮಗ ಕಾಣೆಯಾಗಿದ್ದು ಹುಡುಕಿ ಕೊಡುವಂತೆ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

