ಹೊಸದಿಗಂತ ಡಿಜಿಟಲ್ ಡೆಸ್ಕ್:
2026-27ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಅನಿವಾಸಿ ಭಾರತೀಯರಿಗೆ ಖುಷಿ ಸುದ್ದಿ ನೀಡಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಭಾರತೀಯರು, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೆಚ್ಚು ಸ್ವಾತಂತ್ರ್ಯದಿಂದ ಹೂಡಿಕೆ ಮಾಡಲು ಅವಕಾಶ ನೀಡಲಾಗಿದೆ. ಎನ್‌ಆರ್‌ಐಗಳ ಹೂಡಿಕೆ ಮಿತಿಯನ್ನು 5%ದಿಂದ 10%ಕ್ಕೆ ಹೆಚ್ಚಿಸಲಾಗಿದೆ.
ಭಾರತದ ಹೊರಗಿರುವ ನಿವಾಸಿಗಳು (PROI) ಈಗ ಪೋರ್ಟ್‌ಫೋಲಿಯೊ ಇನ್ವೆಸ್ಟ್‌ಮೆಂಟ್ ಸ್ಕೀಮ್ (PIS) ಮೂಲಕ ಲಿಸ್ಟ್ ಮಾಡಲಾದ ಭಾರತೀಯ ಕಂಪನಿಗಳ ಇಕ್ವಿಟಿ ಷೇರುಗಳಲ್ಲಿ ಹೂಡಿಕೆ ಮಾಡಲು ಅನುಮತಿ ನೀಡಲಾಗುತ್ತದೆ. ಇದುವರೆಗೆ ಒಬ್ಬ PROIಗೆ 5% ಹೂಡಿಕೆ ಮಿತಿಯಿದ್ದರೆ, ಈಗ ಅದನ್ನು 10%ಕ್ಕೆ ಹೆಚ್ಚಿಸಲಾಗಿದೆ.
ಎಲ್ಲಾ ವೈಯಕ್ತಿಕ PROIಗಳ ಒಟ್ಟು ಹೂಡಿಕೆ ಮಿತಿಯನ್ನು ಪ್ರಸ್ತುತ 10%ರಿಂದ 24%ಕ್ಕೆ ಏರಿಸಲಾಗಿದೆ. ಇದು ವಿದೇಶದಲ್ಲಿರುವ ಭಾರತೀಯ ಹೂಡಿಕೆದಾರರಿಗೆ ದೊಡ್ಡ ಉತ್ತೇಜನವಾಗಿದೆ ಎಂದು ತಿಳಿಸಿದರು.
ವಿದೇಶ ಶಿಕ್ಷಣಕ್ಕೆ ಮತ್ತಷ್ಟು ನೆರವು
ವಿದೇಶದಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳ ಕುಟುಂಬಗಳಿಗೆ ಕಳೆದ ಬಜೆಟ್ ಮಹತ್ವದ ರಿಲೀಫ್ ನೀಡಿತ್ತು. LRS (Liberalised Remittance Scheme) ಅಡಿಯಲ್ಲಿ ಶಿಕ್ಷಣ ಸಾಲದ ಮೂಲಕ ವಿದೇಶಕ್ಕೆ ಹಣ ಕಳುಹಿಸುವಾಗ ವಿಧಿಸಲಾಗುತ್ತಿದ್ದ TCS (Tax Collected at Source) ಅನ್ನು ರದ್ದುಪಡಿಸಲಾಗಿತ್ತು. ಇದರಿಂದ ವಿದೇಶ ಶಿಕ್ಷಣದ ಒಟ್ಟು ವೆಚ್ಚ ಕಡಿಮೆಯಾಗಿದೆ. ಇದಲ್ಲದೆ, ಕುಟುಂಬ ಸದಸ್ಯರಿಗೆ ತೆರಿಗೆ ರಹಿತವಾಗಿ ಹಣ ಕಳುಹಿಸುವ ಮಿತಿಯನ್ನು ರೂ. 10 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಈ ಮಿತಿಗಿಂತ ಹೆಚ್ಚು ಹಣ ಕಳುಹಿಸಿದರೆ, ಹೆಚ್ಚುವರಿ ಮೊತ್ತಕ್ಕೆ 20% TCS ವಿಧಿಸಲಾಗುತ್ತದೆ.



