Wednesday, November 5, 2025

ಮಾರುಕಟ್ಟೆಗೆ ವಾಪಸ್ ಬಂತು ಗೂಳಿ: 2026ರ ಜೂನ್‌ಗೆ ಸೆನ್ಸೆಕ್ಸ್ 📈 100K ಸಾಧ್ಯತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಳೆದೊಂದುವರೆ ವರ್ಷದಿಂದ ಕಂಡುಬಂದ ನೀರಸ ಪ್ರದರ್ಶನದಿಂದ ಬೇಸರಗೊಂಡಿರುವ ಹೂಡಿಕೆದಾರರಿಗೆ ಸಂತಸದ ಸುದ್ದಿ. ಜಾಗತಿಕ ಹಣಕಾಸು ದೈತ್ಯ ಸಂಸ್ಥೆಯಾದ ಮಾರ್ಗನ್ ಸ್ಟಾನ್ಲೀ ಭಾರತದ ಷೇರು ಮಾರುಕಟ್ಟೆಗೆ ಭವಿಷ್ಯ ಉಜ್ವಲವಾಗಿದೆ ಎಂದು ಭವಿಷ್ಯ ನುಡಿದಿದೆ. ಮಾರುಕಟ್ಟೆಯಲ್ಲಿನ ‘ಪ್ರೈಸ್ ಕರೆಕ್ಷನ್’ ಹಂತ ಮುಗಿದಿದ್ದು, ಇನ್ನು ಮುಂದೆ ‘ಬುಲ್ ರನ್’ ಆರಂಭವಾಗಲಿದೆ ಎಂಬ ವಿಶ್ಲೇಷಣೆಯನ್ನು ಅದು ನೀಡಿದೆ.

2026ರ ಜೂನ್‌ಗೆ ಸೆನ್ಸೆಕ್ಸ್ ಒಂದು ಲಕ್ಷ!

ಮಾರ್ಗನ್ ಸ್ಟಾನ್ಲಿಯ ಅಂದಾಜಿನ ಪ್ರಕಾರ, ಮುಂಬೈ ಷೇರು ಮಾರುಕಟ್ಟೆಯ (BSE) ಪ್ರಮುಖ ಸೂಚ್ಯಂಕವಾದ ಸೆನ್ಸೆಕ್ಸ್ (Sensex), 2026ರ ಜೂನ್ ವೇಳೆಗೆ 1,00,000 ಅಂಕಗಳ ಮಹತ್ವದ ಮೈಲಿಗಲ್ಲನ್ನು ತಲುಪುವ ಸಾಧ್ಯತೆ ಇದೆ. ಈ ‘ಬುಲ್ ರನ್’ ನಡೆಯುವ ಸಂಭವನೀಯತೆ ಶೇಕಡಾ 30ರಷ್ಟು ಎಂದು ಸಂಸ್ಥೆ ಹೇಳಿದೆ.

ಇಂದು ಸೆನ್ಸೆಕ್ಸ್ ಸೂಚ್ಯಂಕವು 83,459.15 ಅಂಕಗಳಲ್ಲಿ ಅಂತ್ಯಗೊಂಡಿದೆ. ಇದು 2024ರ ಸೆಪ್ಟೆಂಬರ್ 27ರಂದು ತಲುಪಿದ್ದ ಗರಿಷ್ಠ ಮಟ್ಟವಾದ 85,571 ಅಂಕಗಳಿಂದ ಕೇವಲ 13-14 ತಿಂಗಳ ಅವಧಿಯಲ್ಲಿ 2,112 ಅಂಕಗಳನ್ನು ಕಳೆದುಕೊಂಡಿದೆ. ಇತಿಹಾಸದಲ್ಲಿ ಹಲವು ಬಾರಿ ಇಂತಹ ‘ಪ್ರೈಸ್ ಕರೆಕ್ಷನ್’ ಹಂತಗಳನ್ನು ದಾಟಿ ಬಂದಿರುವ ಮಾರುಕಟ್ಟೆ, ದೀರ್ಘಾವಧಿಯಲ್ಲಿ ಉತ್ತಮ ಏರಿಕೆ ಕಂಡಿದೆ.

ಮಾರ್ಗನ್ ಸ್ಟಾನ್ಲಿಯ ಅಂದಾಜಿನಂತೆ, ಬುಲ್ ರನ್ ಶುರುವಾದರೆ ಮುಂದಿನ ಕೇವಲ 6 ತಿಂಗಳಲ್ಲೇ ಸೆನ್ಸೆಕ್ಸ್ ಶೇಕಡಾ 20ರಷ್ಟು ಏರಿಕೆ ಕಂಡು 1,00,000 ಅಂಕಗಳ ಗಡಿ ಮುಟ್ಟುತ್ತದೆ.

ಆರ್ಥಿಕ ಚೇತರಿಕೆಯೇ ಏರಿಕೆಗೆ ಪ್ರಮುಖ ಕಾರಣ

ಬಡ್ಡಿದರ ಇಳಿಕೆ: ಗಣನೀಯವಾಗಿ ಇಳಿಕೆಯಾಗಿರುವ ಹಣದುಬ್ಬರದಿಂದಾಗಿ ಬಡ್ಡಿದರಗಳು ಇಳಿಕೆಯಾಗುವ ನಿರೀಕ್ಷೆ.

ಹಣದ ಹರಿವು ಹೆಚ್ಚಳ: ಬ್ಯಾಂಕಿಂಗ್ ನಿಯಮಗಳ ಸಡಿಲಿಕೆ ಮತ್ತು ಮಾರುಕಟ್ಟೆಯಲ್ಲಿ ಹಣದ ಹರಿವು ಹೆಚ್ಚಳ.

ಸರ್ಕಾರಿ ವೆಚ್ಚ: ಸರ್ಕಾರದ ಬಂಡವಾಳ ವೆಚ್ಚ ಹೆಚ್ಚಳ.

ತೆರಿಗೆ ಸುಧಾರಣೆ: ಜಿಎಸ್‌ಟಿ ದರ ಕಡಿತದ ಪರಿಣಾಮಗಳು ಆರ್ಥಿಕತೆಗೆ ಉತ್ತೇಜನ ನೀಡುತ್ತಿವೆ.

ಈ ಎಲ್ಲಾ ಅಂಶಗಳು ಒಟ್ಟಾಗಿ ದೇಶದ ಆರ್ಥಿಕತೆಯನ್ನು ಬಲಪಡಿಸುತ್ತವೆ. ಇದರ ಸಕಾರಾತ್ಮಕ ಪರಿಣಾಮ ಷೇರು ಮಾರುಕಟ್ಟೆಯ ಮೇಲೂ ಗೋಚರವಾಗಲಿದೆ ಎಂಬುದು ಮಾರ್ಗನ್ ಸ್ಟಾನ್ಲೀ ಸಂಸ್ಥೆಯ ಆಶಾದಾಯಕ ವಿಶ್ಲೇಷಣೆ.

error: Content is protected !!