ಹೊಸದಿಗಂತ ಡಿಜಿಟಲ್ ಡೆಸ್ಕ್:
2026-27ನೇ ಸಾಲಿನ ಬಜೆಟ್‌ನ್ನು ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿದ್ದು, ಶಿಕ್ಷಣ ವಲಯಕ್ಕೆ ಈ ಬಾರಿ ಬಂಪರ್ ಕೊಡುಗೆಗಳು ಸಿಕ್ಕಿವೆ. ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿ ಮಾಡಲಾಗುತ್ತದೆ, ಪ್ರಸಕ್ತ ಸಾಲಿನಲ್ಲಿ 15 ಸಾವಿರ ಭೋದಕ ಹುದ್ದೆಗಳ ನೇಮಕಾತಿ ಮಾಡಲಾಗುವುದು ಎಂದಿದ್ದಾರೆ.
800 ಶಾಲೆಗಳು ಪಬ್ಲಿಕ್ ಶಾಲೆಗಳಾಗಿ ಉನ್ನತೀಕರಣಕ್ಕೆ ನಿರ್ಧರಿಸಲಾಗುತ್ತದೆ. 800 ಶಾಲೆಗಳ ಉನ್ನತೀಕರಣಕ್ಕೆ 3900 ಕೋಟಿ ರೂ. ಅನುದಾನ ನೀಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಉಚಿತ ಪಠ್ಯ ಪುಸ್ತಕ ನೀಡಲಾಗುತ್ತದೆ ಎಂದಿದ್ದಾರೆ.
1ರಿಂದ 10ನೇ ತರಗತಿಯವರೆಗೆ ಉಚಿತ ಪಠ್ಯ ಪುಸ್ತಕಗಳ ವಿತರಣೆ ಮಾಡಲಾಗುತ್ತದೆ.565 ಕೋಟಿ ರೂ. ವೆಚ್ಚದಲ್ಲಿ ಶಾಲೆಗಳ ದುರಸ್ತಿಗೆ ಸರ್ಕಾರ ಕ್ರಮ ಕೈಗೊಳ್ಳಲಾಗುವುದು. ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ 75 ಕೋಟಿ ರೂ. ಮೀಸಲು, ಶಾಲಾ-ಕಾಲೇಜು ನಿರ್ವಹಣೆಗಾಗಿ 125 ಕೋಟಿ ರೂ. ಅನುದಾನ ನೀಡಲಾಗುವುದು, ಶಿಕ್ಷಕರ ಇಂಗ್ಲಿಷ್ ಭಾಷಾ ತರಬೇತಿ 24 ಕೋಟಿ ರೂ. ಅನುದಾನ, 8ರಿಂದ 12ನೇ ತರಗತಿಗೆ AI ಆಧಾರಿತ ಕಲಿಕಾ ಸೌಲಭ್ಯ, ವಿದ್ಯಾರ್ಥಿಗಳ ಒತ್ತಡ ನಿವಾರಣೆಗೆ ಆರೋಗ್ಯ ಸಲಹೆಗಾರರ ನೇಮಕ ಮಾಡಲಾಗುವುದು.
ಇನ್ನು 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿರುವಂತೆ 184 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳನ್ನು ಪ್ರೌಢ ಶಾಲೆಗಳನ್ನಾಗಿ ಹಾಗೂ 50 ಪ್ರೌಢ ಶಾಲೆಗಳನ್ನು ಪದವಿ ಪೂರ್ವ ಕಾಲೇಜುಗಳನ್ನಾಗಿ ಉನ್ನತೀಕರಿಸಿಲಾಗುತ್ತದೆ ಎಂದಿದ್ದಾರೆ.



