Thursday, December 25, 2025

ಊಟಕ್ಕೆ ಬಸ್ ನಿಂತಾಗ ಹಣಕ್ಕೆ ಬಿತ್ತು ಕನ್ನ: ಮಧ್ಯಪ್ರದೇಶದ ‘ಬಸ್ ಹೈಜಾಕ್’ ಗ್ಯಾಂಗ್ ಅರೆಸ್ಟ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನಿಂದ ಹೈದರಾಬಾದ್‌ಗೆ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಎಸಿ ಸ್ಲೀಪರ್ ಬಸ್‌ನಲ್ಲಿ ನಡೆದಿದ್ದ 55 ಲಕ್ಷ ರೂಪಾಯಿ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಗುಡಿಬಂಡೆ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆಯ ಹಿನ್ನೆಲೆ:

ಇದೇ ತಿಂಗಳ 8ರಂದು ವೆಂಕಟೇಶ್ವರ್ ರಾವ್ ಎಂಬ ಪ್ರಯಾಣಿಕರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಚಿಕ್ಕಬಳ್ಳಾಪುರ ತಾಲೂಕಿನ ಅರೂರು ಗ್ರಾಮದ ಹೋಟೆಲ್ ಬಳಿ ಊಟಕ್ಕಾಗಿ ಬಸ್ ನಿಲ್ಲಿಸಿದಾಗ, ರಾವ್ ತಮ್ಮ ಹಣದ ಬ್ಯಾಗ್ ಅನ್ನು ಸೀಟಿನಲ್ಲೇ ಬಿಟ್ಟು ಹೋಗಿದ್ದರು. ಇದನ್ನು ಗಮನಿಸುತ್ತಿದ್ದ ಖದೀಮರು ಕ್ಷಣಾರ್ಧದಲ್ಲಿ ಹಣದೊಂದಿಗೆ ಪರಾರಿಯಾಗಿದ್ದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ತನಿಖೆ ನಡೆಸಿ, ಮಧ್ಯಪ್ರದೇಶ ಮೂಲದ ಅಸ್ಲಂ ಖಾನ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತನಿಂದ ಕಳುವಾಗಿದ್ದ ಪೂರ್ಣ ಪ್ರಮಾಣದ ಹಣವನ್ನು ಜಪ್ತಿ ಮಾಡಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ಆರೋಪಿಗಳಾದ ಮನೀರ್ ಖಾನ್, ಅಭ್ಯಾಖಾನ್ ಮತ್ತು ಶೇರು ತಲೆಮರೆಸಿಕೊಂಡಿದ್ದು, ಅವರಿಗಾಗಿ ಶೋಧ ಮುಂದುವರಿದಿದೆ.

error: Content is protected !!