Tuesday, December 30, 2025

ರಿವರ್ಸ್ ತೆಗೆದುಕೊಳ್ಳುವಾಗ ಪಾದಚಾರಿಗಳ ಮೇಲೆ ಹರಿದ ಬಸ್​​: ನಾಲ್ವರು ಮೃತ್ಯು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನ ಉಪನಗರ ಭಾಂಡಪ್ ವೆಸ್ಟ್‌ನಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಪಾದಚಾರಿಗಳು ಮೃತಪಟ್ಟಿದ್ದು, ಇನ್ನೂ ಒಂಬತ್ತು ಮಂದಿ ಗಾಯಗೊಂಡಿದ್ದಾರೆ. ಬೃಹನ್ಮುಂಬೈ ವಿದ್ಯುತ್ ಸರಬರಾಜು ಮತ್ತು ಸಾರಿಗೆ ಸಂಸ್ಥೆಯ (ಬೆಸ್ಟ್) ಎಲೆಕ್ಟ್ರಿಕ್ ಎಸಿ ಬಸ್ ರಿವರ್ಸ್ ತೆಗೆದುಕೊಳ್ಳುವ ವೇಳೆ ನಿಯಂತ್ರಣ ತಪ್ಪಿ ಪಾದಚಾರಿಗಳ ಮೇಲೆ ಹರಿದಿದೆ.

ರಾತ್ರಿ ಸುಮಾರು 10.05ರ ವೇಳೆಗೆ ಭಾಂಡಪ್ ವೆಸ್ಟ್ ರೈಲ್ವೆ ನಿಲ್ದಾಣದ ಹೊರಭಾಗದ ಸ್ಟೇಷನ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ರೂಟ್ ನಂ.606ರಲ್ಲಿ ಸಂಚರಿಸುತ್ತಿದ್ದ ಬಸ್, ರೂಟ್ ಅಂತ್ಯದಲ್ಲಿ ಹಿಂದಕ್ಕೆ ಸಾಗುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಂತಿದ್ದ ಜನರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಮಹಿಳೆಯರು ಹಾಗೂ ಒಬ್ಬ ಪುರುಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ಬಸ್ ಚಾಲಕ ಸಂತೋಷ್ ರಮೇಶ್ ಸಾವಂತ್ (52) ಅವರನ್ನು ಪೊಲೀಸರು ವಶಕ್ಕೆ ಪಡೆದು, ಅಜಾಗ್ರತೆಯಿಂದ ಸಾವು ಉಂಟುಮಾಡಿದ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಬೆಸ್ಟ್ ಸಂಸ್ಥೆ ಚಾಲಕನನ್ನು ಅಮಾನತುಗೊಳಿಸಿ ಆಂತರಿಕ ತನಿಖೆಗೆ ಆದೇಶಿಸಿದೆ. ಘಟನೆಗೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

error: Content is protected !!