Tuesday, October 21, 2025

ಚಾಲಕನ ನಿಯಂತ್ರಣ ತಪ್ಪಿ ವಡ್ಡಿ ಘಾಟ್ ತಿರುವಿನಲ್ಲಿ ಪಲ್ಟಿ ಹೊಡೆದ ಬಸ್

ಹೊಸದಿಗಂತ ವರದಿ, ಅಂಕೋಲಾ:

ಬಳ್ಳಾರಿಯಿಂದ ಕುಮಟಾ ಕಡೆಗೆ ಪ್ರಯಾಣಿಸುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ವಡ್ಡಿ ಘಾಟ್ ತಿರುವಿನಲ್ಲಿ ಮೂರು ಪಲ್ಟಿ ಹೊಡೆದು ಕಂದಕಕ್ಕೆ ಉರುಳಿದ ಪರಿಣಾಮ ಬಸ್ಸಿನಲ್ಲಿದ್ದ ಚಾಲಕ ನಿರ್ವಾಹಕ ಸೇರಿ ೪೯ ಪ್ರಯಾಣಿಕರಿಗೆ ಗಾಯಗಳಾದ ಘಟನೆ ಶನಿವಾರ ಸಂಜೆ ನಡೆದಿದೆ.

ಕುಮಟಾ ಶಿರಸಿ ರಸ್ತೆಯು ಕಾಮಗಾರಿಯ ನಿಮಿತ್ತ ಬಂದ್ ಮಾಡಲಾಗಿದ್ದು, ಶಿರಸಿಗೆ ಪ್ರಯಾಣಿಸುವ ಬಸ್ ಮಾರ್ಗವನ್ನು ವಡ್ಡಿ ಮಾರ್ಗವಾಗಿ ಬದಲಿಸಲಾಗಿತ್ತು. ರಾಜ್ಯ ಹೆದ್ದಾರಿಯಾದ ಇದು ಘಟ್ಟದ ಪ್ರದೇಶದಲ್ಲಿ ಭಾರೀ ತಿರುವು ಇದ್ದು, ಈ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಉರುಳಿ ಕಂದಕಕ್ಕೆ ಬಿದ್ದಿದೆ. ಈ ಸಂದರ್ಭದಲ್ಲಿ ಬಸ್‌ನಲ್ಲಿ ಒಟ್ಟು ೪೯ ಮಂದಿ ಪ್ರಯಾಣಿಕರು ಇದ್ದರು. ಅದೃಷ್ಟವಶಾತ್ ಯಾರಿಗೂ ಪ್ರಾಣಾಪಾಯವಾಗಿಲ್ಲ. ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಖಾಸಗಿ ವಾಹನಗಳ ಮೂಲಕ ಅಂಕೋಲಾ ಮತ್ತು ಕುಮಟಾ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಈ ಬಸ್ ಕುಮಟಾ ಘಟಕಕ್ಕೆ ಸೇರಿದ್ದು, ಘಟನಾ ಸ್ಥಳಕ್ಕೆ ಅಂಕೋಲಾ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಽಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಡ್ಡಿಘಾಟ್ ಪ್ರದೇಶದ ತಿರುವುಗಳು ಅಪಾಯಕಾರಿ ಸ್ವರೂಪ ಪಡೆದಿರುವ ಹಿನ್ನೆಲೆಯಲ್ಲಿ ರಸ್ತೆ ಅಗಲೀಕರಣ ಮತ್ತು ತಿರುವು ಸರಿಪಡಿಸಿ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸ್ಥಳೀಯ ಹಾಗೂ ಜಿಪಂ ಸದಸ್ಯ ಜಿಎಂ.ಶೆಟ್ಟಿಯವರು ಆಗ್ರಹಿಸಿದ್ದಾರೆ.
ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!