ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಸಿಲಿಕಾನ್ ಸಿಟಿ ಬೆಂಗಳೂರು ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ. ನಗರದ ದಕ್ಷಿಣ ಭಾಗದಲ್ಲಿರುವ ಬಿಡದಿಯಲ್ಲಿ ಬೃಹತ್ ಪ್ರಮಾಣದ ಹೊಸ ಐಟಿ ನಗರವನ್ನು ನಿರ್ಮಿಸುವ ಯೋಜನೆ ಇದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಿಸಿದ್ದಾರೆ.
ಬೆಂಗಳೂರಿನಲ್ಲಿ ನಡೆಯುತ್ತಿರುವ ಬಂಡವಾಳ ಹೂಡಿಕೆಯ ಕುರಿತು ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್, ಬೆಂಗಳೂರಿನಲ್ಲಿ ಬಿಲಿಯನ್ ಡಾಲರ್‌ಗಳಷ್ಟು ಬಂಡವಾಳ ಹೂಡಿಕೆ ಮಾಡಲು ಹಲವಾರು ದೇಶಗಳ ಉದ್ಯಮ ನಾಯಕರು ಉತ್ಸುಕರಾಗಿದ್ದಾರೆ. “ಪ್ರತಿದಿನ ಜಗತ್ತಿನ ನಾನಾ ದೇಶಗಳ ನಾಯಕರು ನನ್ನನ್ನು ಭೇಟಿ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಉದ್ದಿಮೆ ಆರಂಭಿಸಲು ಅನೇಕರು ಆಸಕ್ತಿ ತೋರಿಸಿದ್ದಾರೆ. ಅವರೆಲ್ಲರ ಬೆಂಬಲಕ್ಕೆ ನಾವು ಸಾಧ್ಯವಾದಷ್ಟು ನಿಂತಿದ್ದೇವೆ” ಎಂದು ತಿಳಿಸಿದರು.
ಟೆಕ್ ಸಮ್ಮಿಟ್‌ಗೆ ಅಭೂತಪೂರ್ವ ಪ್ರತಿಕ್ರಿಯೆ: ಭವಿಷ್ಯದ ದಿಕ್ಸೂಚಿ!
ಸದ್ಯ ನಡೆಯುತ್ತಿರುವ ಟೆಕ್ ಸಮ್ಮಿಟ್ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ, ಈ ಸಮ್ಮೇಳನಕ್ಕೆ ಜಾಗತಿಕ ಮಟ್ಟದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. “60 ದೇಶಗಳ ಪ್ರತಿನಿಧಿಗಳು, ದೇಶದ ಎಲ್ಲಾ ರಾಜ್ಯಗಳ ಪ್ರಮುಖರು ಸೇರಿ ಸುಮಾರು 50 ಸಾವಿರ ಮಂದಿ ಭಾಗವಹಿಸಲಿದ್ದಾರೆ. ಹಾಗೆಯೇ, 1,500 ದೊಡ್ಡ ಕಂಪನಿಗಳು ಸಮ್ಮೇಳನದಲ್ಲಿ ಭಾಗಿಯಾಗುತ್ತಿವೆ” ಎಂದು ಮಾಹಿತಿ ನೀಡಿದರು.
ಇಂತಹ ಕಾರ್ಯಕ್ರಮಗಳು ಇಲ್ಲಿನ ಪ್ರತಿಭೆಗಳಿಗೆ ಹೊಸ ಆವಿಷ್ಕಾರ, ತಂತ್ರಜ್ಞಾನ ಮತ್ತು ಸ್ಟಾರ್ಟ್ ಅಪ್‌ಗಳ ಮೂಲಕ ಕರ್ನಾಟಕವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲು ನೆರವಾಗುತ್ತವೆ. ಮುಂದಿನ ಪೀಳಿಗೆಯ ಯುವಕರಿಗೆ “ನೀವು ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸಬೇಕು” ಎಂದು ನಾನು ಸದಾ ಹೇಳುತ್ತಿರುತ್ತೇನೆ. ಹೊಸ ಆಲೋಚನೆಗಳೊಂದಿಗೆ ಬರುವವರಿಗೆ ಸ್ಟಾರ್ಟ್ ಅಪ್ ಮೂಲಕ ಬೆಳೆಯಲು ಸರ್ಕಾರ ಸಂಪೂರ್ಣ ಬೆಂಬಲ ಮತ್ತು ಅವಕಾಶ ಕಲ್ಪಿಸಲಿದೆ ಎಂದು ಅವರು ಭರವಸೆ ನೀಡಿದರು.
ಉದ್ಯಮಸ್ನೇಹಿ ವಾತಾವರಣ: ಮಾನವ ಸಂಪನ್ಮೂಲವೇ ನಮ್ಮ ಶಕ್ತಿ
“ನಮ್ಮನ್ನು ನಂಬಿ ಬಂದವರಿಗೆ ಉತ್ತಮ ಅವಕಾಶ ನೀಡುವುದು ನಮ್ಮ ಕರ್ತವ್ಯ. ರಾಜ್ಯದಲ್ಲಿ ಉದ್ಯಮಸ್ನೇಹಿ ವಾತಾವರಣ ನಿರ್ಮಿಸಲಾಗುವುದು” ಎಂದು ಡಿಸಿಎಂ ಸ್ಪಷ್ಟಪಡಿಸಿದರು.
ಐಟಿ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಕಿಯೋನಿಕ್ಸ್ ಜವಾಬ್ದಾರಿ ಹೊತ್ತಿರುವ ಶರತ್ ಬಚ್ಚೇಗೌಡ ಅವರು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ವಾತಾವರಣ, ಇಲ್ಲಿರುವ 25 ಲಕ್ಷಕ್ಕೂ ಹೆಚ್ಚು ಐಟಿ ಪರಿಣಿತರು ಮತ್ತು ಮಾನವ ಸಂಪನ್ಮೂಲಗಳು ಬೇರೆಲ್ಲೂ ಇಲ್ಲ. ಈ ಮೂರು ದಿನಗಳ ಸಮ್ಮೇಳನದಲ್ಲಿ ರಾಜ್ಯದ ಭವಿಷ್ಯದ ಬಗ್ಗೆ ಚರ್ಚೆ ನಡೆಸಲಾಗುವುದು. “ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ದಿನದಿಂದಲೂ ಎಲ್ಲಾ ಕ್ಷೇತ್ರಗಳಿಗೂ ಪ್ರತ್ಯೇಕ ನೀತಿಗಳನ್ನು ರೂಪಿಸಿ ಪ್ರೋತ್ಸಾಹ ನೀಡುತ್ತಿದೆ” ಎಂದರು.

