ಹೊಸದಿಗಂತ ಡಿಜಿಟಲ್ ಡೆಸ್ಕ್:
ರಿಯಲ್ ಎಸ್ಟೇಟ್ ಉದ್ಯಮಿ ರಘುನಾಥ್ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ತಿರುಮಲ ತಿರುಪತಿ ದೇವಸ್ಥಾನದ (ಟಿಟಿಡಿ) ಮಾಜಿ ಅಧ್ಯಕ್ಷ ಹಾಗೂ ಲೋಕಸಭಾ ಸದಸ್ಯರಾಗಿದ್ದ ದಿ. ಆದಿಕೇಶವುಲು ನಾಯ್ಡು ಅವರ ಮಕ್ಕಳನ್ನೇ ಸಿಬಿಐ (CBI) ಬಂಧಿಸಿದೆ.
ರಘುನಾಥ್‌ಗೆ ಸೇರಿದ ಆಸ್ತಿ ಸಂಬಂಧ ನಕಲಿ ಛಾಪಾಕಾಗದ ಮತ್ತು ನಕಲಿ ವಿಲ್ ಸೃಷ್ಟಿ ಮಾಡಿದ ಆರೋಪದಲ್ಲಿ ಸಿಬಿಐ ಆರೋಪಿಗಳನ್ನು ಬಂಧಿಸಿದೆ. ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದರು.
ಆದಿಕೇಶವುಲು ಮಗ ಶ್ರೀನಿವಾಸ್ ಮಗಳು ಕಲ್ಪಜ, ಡಿವೈಎಸ್‌ಪಿ ಮೋಹನ್ ಅವರನ್ನು 48ನೇ ಎಸಿಜೆಎಂ ನ್ಯಾಯಾಲಯ 7 ದಿನಗಳ ಕಾಲ ಸಿಬಿಐ ಕಸ್ಟಡಿಗೆ ನೀಡಿ ಆದೇಶಿಸಿದೆ.
ಏನಿದು ಪ್ರಕರಣ?
ಹೆಚ್‌ಎಎಲ್ ಠಾಣಾ ವ್ಯಾಪ್ತಿಯ ಕುಂದಲಹಳ್ಳಿ ಬಳಿ ಮೇ 14, 2019 ರಲ್ಲಿಆದಿಕೇಶವುಲು ಗೆಸ್ಟ್ ಹೌಸ್‌ನಲ್ಲಿ ರಘುನಾಥ್ ಮೃತಪಟ್ಟಿದ್ದರು. ರಘುನಾಥ್ ಬಳಿಯಿಂದ ಆಸ್ತಿಯನ್ನು ಶ್ರೀನಿವಾಸ್ ಮತ್ತು ಕಲ್ಪಜ ಬರೆಸಿಕೊಂಡ ಆರೋಪ ಕೇಳಿಬಂದಿತ್ತು.
ರಘುನಾಥ್ ಸಾವಿನ ಬಳಿಕ ಹೆಚ್‌ಎಎಲ್ ಪೊಲೀಸ್ ಠಾಣೆಗೆ ರಘುನಾಥ್ ಪತ್ನಿ ಮಂಜುಳ ದೂರು ನೀಡಿ, ಆದಿಕೇಶವುಲು ಮಕ್ಕಳಾದ ಶ್ರೀನಿವಾಸ್, ದಾಮೋದರ್, ರಾಮಚಂದ್ರಯ್ಯ ಮತ್ತು ಪ್ರತಾಪ್ ಕೊಲೆ ಮಾಡಿ ಅದನ್ನು ಆತ್ಮಹತ್ಯೆ ಎಂದು ಬಿಂಬಿಸಿದ್ದಾರೆ. ನಕಲಿ ವಿಲ್ ಅನ್ನು ಎಸಿ ಕೋರ್ಟ್ ಸಲ್ಲಿಕೆ ಮಾಡಿ ರಘುನಾಥ್ ಅವರ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ಆರೋಪಿಸಿದ್ದರು. ಪ್ರಕರಣದ ತನಿಖೆ ನಡೆಸಿದ ಹೆಚ್‌ಎಎಲ್ ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು.
ರಘುನಾಥ್ ಪತ್ನಿ ಬಿ ರಿಪೋರ್ಟ್ ಪಶ್ನಿಸಿ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಕೆ ಮಾಡಿದ್ದರು. ರಿಟ್ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ವಿಶೇಷ ತನಿಖಾ ತಂಡವನ್ನು (SIT) ರಚಿಸಿ ತನಿಖೆ ನಡೆಸುವಂತೆ ಆದೇಶಿಸಿತ್ತು. ಎಸ್‌ಐಟಿ ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿತ್ತು. ಈ ಬಿ ರಿಪೋರ್ಟ್ ಪ್ರಶ್ನಿಸಿ ಮಂಜುಳ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
.

