ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ತಮ್ಮ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ತಮ್ಮ ಸಂಪುಟದ ಸಹೋದ್ಯೋಗಿಗಳಿಗೆ ವಿಶೇಷ ಭೋಜನಕೂಟ ಏರ್ಪಡಿಸಿದ್ದಾರೆ. ಈ ಔತಣಕೂಟವು ಕೇವಲ ಸೌಹಾರ್ದ ಭೇಟಿಯಾಗಿರದೆ, ಸರ್ಕಾರದ ಮುಂದಿನ ನಡೆಗಳ ಬಗ್ಗೆ ಮಹತ್ವದ ಚರ್ಚೆಗೆ ವೇದಿಕೆಯಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ರಾಮಲಿಂಗಾರೆಡ್ಡಿ ಮತ್ತು ಪ್ರಿಯಾಂಕ್ ಖರ್ಗೆ ಸೇರಿದಂತೆ ಹಲವು ಸಚಿವರು ಈಗಾಗಲೇ ಸಿಎಂ ನಿವಾಸಕ್ಕೆ ಆಗಮಿಸಿದ್ದು, ಉಳಿದ ಸಂಪುಟ ಸದಸ್ಯರು ಸಹ ಆಗಮಿಸುತ್ತಿದ್ದಾರೆ.
ಎರಡೂವರೆ ವರ್ಷದ ಬಳಿಕದ ಭೋಜನಕೂಟದ ಹಿಂದಿದೆಯೇ ಪುನರ್‌ರಚನೆಯ ಗುಟ್ಟು?
ಸಿದ್ದರಾಮಯ್ಯ ಅವರ ಸರ್ಕಾರ ಅಧಿಕಾರಕ್ಕೆ ಬಂದು ಸುಮಾರು ಎರಡೂವರೆ ವರ್ಷಗಳ ಬಳಿಕ ಈ ಭೋಜನಕೂಟ ಆಯೋಜಿಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ಭೇಟಿಯು ಮುಂಬರುವ ದಿನಗಳಲ್ಲಿ ಸಚಿವ ಸಂಪುಟ ಪುನರ್‌ರಚನೆಗೆ ಮುನ್ನುಡಿಯಾಗಬಹುದು ಎಂಬ ಬಲವಾದ ಚರ್ಚೆ ಶುರುವಾಗಿದೆ.
ಮಾಹಿತಿಗಳ ಪ್ರಕಾರ, ಕ್ಯಾಬಿನೆಟ್‌ನಲ್ಲಿರುವ ಕೆಲವು ನಿಷ್ಕ್ರಿಯ ಸಚಿವರು ಹಾಗೂ ನಿರೀಕ್ಷಿತ ಮಟ್ಟದಲ್ಲಿ ಕಾರ್ಯನಿರ್ವಹಿಸದ ಶಾಸಕರನ್ನು ಕೈಬಿಟ್ಟು, ಅವರ ಸ್ಥಾನಕ್ಕೆ ಅದೇ ಜಾತಿವಾರು ಪ್ರಾತಿನಿಧ್ಯದ ಆಧಾರದ ಮೇಲೆ ಹೊಸ ಮುಖಗಳನ್ನು ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಮಹತ್ವದ ನಿರ್ಧಾರ ಮತ್ತು ಬದಲಾವಣೆಯ ಕುರಿತು ಎಲ್ಲ ಸಚಿವರಿಗೂ ಮನವರಿಕೆ ಮಾಡಿಕೊಡುವ ಉದ್ದೇಶದಿಂದಲೇ ಸಿಎಂ ಸಿದ್ದರಾಮಯ್ಯ ಅವರು ಈ ಭೋಜನಕೂಟವನ್ನು ಕರೆದಿದ್ದಾರೆ ಎಂಬ ಗುಸುಗುಸು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದೆ. ಈ ‘ಕಾವೇರಿ’ಯ ಕೂಗು ರಾಜ್ಯ ರಾಜಕಾರಣದಲ್ಲಿ ಯಾವ ಬದಲಾವಣೆಗಳಿಗೆ ಕಾರಣವಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.